ಪಾತಪಾಳ್ಯ, ಮೇ 12 (Daijiworld News/MB) : ಸಾಂಬಾರಿನಲ್ಲಿ ಉಪ್ಪು ಜಾಸ್ತಿಯಾದ ಕಾರಣಕ್ಕೆ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಪಂ ವ್ಯಾಪ್ತಿಯ ಹೊಸಹುಡ್ಯ (ಉಪ್ಪಕುಂಟಪಲ್ಲಿ)ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಮಧುರ(24) ಎಂದು ಗುರುತಿಸಲಾಗಿದೆ.
ಮಧುರಳನ್ನು ಪ್ರೀತಿಸಿ ವಿವಾಹವಾಗಿದ್ದ ಆರೋಪಿ ಬಾಲಚಂದ್ರ (28) ಖಾಸಗಿ ಬಸ್ ಚಾಲಕನಾಗಿದ್ದು ಮದ್ಯಪಾನ ಮಾಡಿ ಬಂದು ಪತ್ನಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.
ಶನಿವಾರ ತಡರಾತ್ರಿಯೂ ಕೂಡಾ ಇದೇ ರೀತಿ ಸಾಂಬಾರಿನಲ್ಲಿ ಉಪ್ಪು ಜಾಸ್ತಿಯಾಗಿದೆ ಎಂದು ಜಗಳ ಆರಂಭಿಸಿದ ಆತ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.