ನವದೆಹಲಿ, ಮೇ 12 (Daijiworld News/MSP): ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿ ಎರಡು ತಿಂಗಳುಗಳ ಸುದೀರ್ಘ ನಿಲುಗಡೆಯ ಬಳಿಕ ಭಾರತೀಯ ರೈಲ್ವೆಯು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಮಂಗಳವಾರ ಪುನರಾರಂಭಿಸಿದೆ.
ದೆಹಲಿಯಿಂದ ಹದಿನೈದು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂವತ್ತು ರೈಲುಗಳಿಗಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮೇ. ೧೧ರ ಸಂಜೆ ೪ ಗಂಟೆಗೆ ಪ್ರಾರಂಭಿಸುವುದಾಗಿ ಇಲಾಖೆ ಹೇಳಿತ್ತು. ಆದರೆ ಜನ ಈ ವೇಳೆ ಏಕಾಏಕಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಪ್ರಯತ್ನಿಸಿದ್ದರಿಂದ ಒತ್ತಡ ಹೆಚ್ಚಾಗಿ ವೆಬ್ ಸೈಟ್ ಕ್ರಷ್ ಆಗಿತ್ತು. ಹೀಗಾಗಿ ಮತ್ತೆ ಬುಕ್ಕಿಂಗ್ ಆರಂಭವಾಗಲು ಎರಡು ಗಂಟೆ ತಡವಾಯಿತು. ಮಾತ್ರವಲ್ಲದೆ ತಮಗೆ ಬೇಕಾದ ಮಾರ್ಗಕ್ಕೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಐಆರ್ ಸಿಟಿಸಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೆ ಸಂಜೆ 6 ಗಂಟೆಗೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು,ಸುಮಾರು 54,000 ಜನರು ಬುಕ್ಕಿಂಗ್ ಮಾಡಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಐಆರ್ ಸಿಟಿಸಿಯಿಂದ ಆನ್ ಲೈನ್ ನಲ್ಲಿ ಮೂರು ಗಂಟೆಯೊಳಗಾಗಿ 54,000ಕ್ಕೂ ಹೆಚ್ಚು ಪ್ರಯಾಣಿಕರಿಂದ ಅಂದಾಜು 30 ಸಾವಿರ ಟಿಕೆಟ್ ಮಾರಾಟವಾಗಿದೆ. ಎಲ್ಲ ಮೂರು ಏಸಿ ಕ್ಲಾಸ್ ಟಿಕೆಟ್ ಗಳು ಮುಂಬೈ ಸೆಂಟ್ರಲ್- ನವ ದೆಹಲಿ ಮಧ್ಯೆ ಮೇ 18ರ ತನಕ ಮಾರಾಟ ಆಗಿದೆ ಎಂದು ತಿಳಿಸಿದೆ
ಅಧಿಕಾರಿಗಳು ಸೋಮವಾರ ರಾತ್ರಿ 9 ಗಂಟೆ ತನಕದ ಮಾಹಿತಿಯನ್ನು ಆಧರಿಸಿ ಹೇಳಿರುವ ಪ್ರಕಾರ, ಈ ಏಸಿ ರೈಲುಗಳಿಗೆ ಮಾರಾಟ ಮಾಡಿರುವ ಟಿಕೆಟ್ ಗಳಿಂದ 10 ಕೋಟಿ ರೂಪಾಯಿ ಆದಾಯ ಬಂದಿದೆ. ಹೌರಾದಿಂದ ಬರುವ ಹಾಗೂ ದೆಹಲಿಯಿಂದ ತೆರಳುವ ರೈಲುಗಳಿಗೆ ತುಂಬ ವೇಗವಾಗಿ ಟಿಕೆಟ್ ಬುಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಜೊತೆಗೆ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.