ನವದೆಹಲಿ, ಮೇ 12 (Daijiworld News/MB) : ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅವರಿಗೆ ಅನಾರೋಗ್ಯ ಕಂಡು ಬಂದಿದ್ದ ಕಾರಣ ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಕೊರೊನಾ ಪರೀಕ್ಷೆಯನ್ನೂ ನಡೆಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು.
ಸಿಂಗ್ ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿದ್ದು ನಿತೀಶ್ ನಾಯ್ಕ್ ನೇತೃತ್ವದ ವೈದ್ಯರ ತಂಡ ಅವರ ಚಿಕಿತ್ಸೆ ಮೇಲ್ವಿಚಾರಣೆ ವಹಿಸಿತ್ತು.
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಏಮ್ಸ್ ಸೋಮವಾರ ರಾತ್ರಿ ತಿಳಿಸಿತ್ತು.
ಹೃದ್ರೋಗ ಸಮಸ್ಯೆ ಕಾಣಿಸಿಕೊಂಡ ಕಾರಣ 87 ವರ್ಷ ವಯಸ್ಸಿನ ಮನಮೋಹನ್ ಸಿಂಗ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 2009ರಲ್ಲಿ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.