ಬೆಂಗಳೂರು, ಮೇ 12 (Daijiworld News/MB) : ತಬ್ಲೀಗ್ ಸದಸ್ಯರಿಂದಾಗಿ ಕೊರೊನಾ ಹರಡುತ್ತಿದೆ ಎಂದು ಆರೋಪ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ತಬ್ಲೀಗ್ ಸಮಾವೇಶಕ್ಕೆ ಅವಕಾಶ ನೀಡಿದ್ದು ಯಾರು ಎಂದು ಮಾಜಿ ಮುಖ್ಯಮಂತ್ರಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಆದರೆ ಸೋಂಕು ಹರಡಲು ತಬ್ಲೀಗ್ಗಳು ಕಾರಣ ಎಂದು ಹೇಳುತ್ತಾರೆ. ತಬ್ಲೀಗ್ ಸದಸ್ಯರು ಅಮೆರಿಕ, ಇಟಲಿಯಂತಹ ಹೆಚ್ಚು ಕೊರೊನಾ ಹರಡಿರುವ ದೇಶದಲ್ಲಿ ಇದ್ದಾರೆಯೇ? ಮತ್ತೆ ಅಲ್ಲಿ ಹೇಗೆ ಸೋಂಕು ಹರಡಿದೆ?. ತಬ್ಲೀಗ್ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ನಾವಾಗಿಯೇ ಸರ್ವ ಪಕ್ಷ ಸಭೆ ನಡೆಸುವಂತೆ ಒತ್ತಡ ಹೇರಿದ ಬಳಿಕ ನಮ್ಮನ್ನು ಕರೆಸಿದರು ಎಂದು ಹೇಳಿದರು.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ನಾವು ಬಸ್ ದರ ನೀಡುತ್ತೇವೆ ಎಂದು ಹೇಳಿದ ಬಳಿಕ ಸರ್ಕಾರ ವಲಸೆ ಕಾರ್ಮಿಕರನ್ನು ಉಚಿತವಾಗಿ ಕರೆದೊಯ್ದಿದೆ. ನಾವು ಒತ್ತಾಯ ಮಾಡಿದ ಫಲವಾಗಿ ಅಸಂಘಟಿತ ಕುಲಕಸುಬುದಾರರಿಗೆ ನೆರವು ನೀಡಲು ಸರ್ಕಾರ ಮುಂದಾಗಿದೆ ಎಂದರು.