ಬೆಂಗಳೂರು, ಮೇ 12 (Daijiworld News/MB) : ಅಪರೂಪದ ವಿದ್ಯಮಾನದಲ್ಲಿ ಮೇ 13 ರ ಬುಧವಾರ ಆಕಾಶದಲ್ಲಿ ಭೂಮಿಯ ಅತಿ ಹತ್ತಿರಕ್ಕೆ ಪ್ರಕಾಶಮಾನವಾದ ಧೂಮಕೇತು ಸ್ವಾನ್ ಹಾದು ಹೋಗಲಿದ್ದು ಯಾವುದೇ ದೂರದರ್ಶಕವಿಲ್ಲದೆಯೇ ನೋಡಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ, ಈ ಧೂಮಕೇತು ಬುಧವಾರ ಬೆಳಿಗ್ಗೆ 4.30 ರಿಂದ 5 ಗಂಟೆ ಸಮಯದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
'ಸ್ವಾನ್' ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ ಹಾದು ಹೋಗಲಿದ್ದು ಸೆಕೆಂಡ್ಗೆ 40ರಿಂದ 50 ಕಿ.ಮೀ. ವೇಗದಲ್ಲಿ ಇದು ಬರಲಿದೆ. ಈ ರೀತಿ ಭೂ ಸನಿಹಕ್ಕೇ ಬಂದು ಬರಿಗಣ್ಣಿಗೆ ಗೋಚರಿಸುವ ಧೂಮಕೇತುಗಳು ಬಹಳ ವಿರಳ. ಹೀಗಾಗಿ, 'ಸ್ವಾನ್' ಗೋಚರಿಸುವಿಕೆ ಕುತೂಹಲ ಕೆರಳಿಸಿದೆ ಎನ್ನುತ್ತಾರೆ ವಿಜ್ಞಾನಿಗಳು.
ಆದರೆ ಈ ಧೂಮಕೇತು ಮುಂಜಾನೆಯ ಹೊತ್ತಿನಲ್ಲಿ ಕಾಣಿಸಿಕೊಳ್ಳುವುದರಿಂದ ಆ ಸಮಯದಲ್ಲಿ ಸೂರ್ಯನ ಬೆಳಕು ಕೂಡ ಹರಡುವುದರಿಂದ ಕಣ್ಣಿಗೆ ಸ್ಪಷ್ಟವಾಗಿ ಕಾಣುವುದು ಕಷ್ಟ. ಈ ಧೂಮಕೇತು 5.7 ಪ್ರಕಾಶಮಾನವನ್ನು (ಮ್ಯಾಗ್ನಿಟ್ಯೂಡ್ ) ಹೊಂದಿದೆ. 6 ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಕಾಣುತ್ತದೆ. ಇದೇ ಧೂಮಕೇತು ರಾತ್ರಿಯ ವೇಳೆ ಸುಳಿದಿದ್ದರೆ ಬರಿಗಣ್ಣಿಗೆ ಕಾಣುತ್ತಿತ್ತು. ಬೆಳಗಿನ ಜಾವ ಆಗಿರುವುದರಿಂದ ಟೆಲಿಸ್ಕೋಪ್ ಬಳಸಿ ನೋಡಬಹುದು. ಆದರೆ, ಊರಿನ ಹೊರಗೆ ಹೋಗಿ ನೋಡುವುದು ಸೂಕ್ತ ಎನುತ್ತಾರೆ ಪ್ರಮೋದ್ ಜಿ. ಗಲಗಲಿ.