ಬೆಂಗಳೂರು, ಮೇ 12 (Daijiworld News/MSP): ಮೇ.17 ರ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣದಲ್ಲಿ ಉತ್ತರ ದೊರಕುವ ಸಾಧ್ಯತೆ ಇದ್ದು, " ಈ ಭಾಷಣದ ಬಗ್ಗೆ ನನಗೇನು ಹೆಚ್ಚಿನ ನಿರೀಕ್ಷೆ ಇಲ್ಲ "ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ಮೋದಿ ಕಳೆದ 6 ವರ್ಷಗಳಿಂದ ಭಾಷಣವನ್ನೇ ಮಾಡುತ್ತಿದ್ದಾರೆ. ಅವರ ಭಾಷಣದಲ್ಲಿ ವಿಶೇಷತೆ ಇರಲ್ಲ, ಅದೇ ಮಾಮೂಲಿ ಬಾಷಣ ಮಾಡುತ್ತಾರೆ. ಆದರೆ ಜನರು ಮರುಳಾಗುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.
ಇದು ಮೋದಿ ಅವರ ಆಡಳಿತದ ಸ್ಟೈಲ್ , ಕೇಳಿದರೆ ಪಿಎಂ ಕೇರ್ ಫಂಡ್ ಬಗ್ಗೆ ಮಾಹಿತಿ ಕೊಡುವುದಿಲ್ಲ. ಅಲ್ಲದೇ, ಮೋದಿ ಅವರ ಭಾಷಣ ಕೇಳೋಕೆ ಚೆಂದ. ಅದನ್ನ ಕೇಳಿಕೊಂಡು ಸುಮ್ಮನೆ ಇರಬೇಕಷ್ಟೆ. ಕಳೆದ 6 ವರ್ಷಗಳಿಂದ ಅದನ್ನು ಕೇಳುತ್ತಲೇ ಇದ್ದೇವೆ. ಮೋದಿ ಮಾತುಗಳನ್ನಷ್ಟು ಆಡುತ್ತಾರೆ, ಕೆಲಸವನ್ನೇನು ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ದೇಶದಾದ್ಯಂತ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು ಅದು ಮೇ 17ರಂದು ಮುಕ್ತಾಯವಾಗಲಿದೆ. ಈ ನಡುವೆ ಮೇ 11 ರ ಸೋಮವಾರ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದ್ದರು.