ಬೆಂಗಳೂರು, ಮೇ 13 (Daijiworld News/MB) : ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಸೋಮವಾರ ರಾತ್ರಿ 14 ರಾಜ್ಯಗಳಿಗೆ ಒಟ್ಟು ₹6,195 ಕೋಟಿ ಎರಡನೇ ಹಂತದ ಅನುದಾನ ಬಿಡುಗಡೆ ಮಾಡಿದ್ದು ಕರ್ನಾಟಕಕ್ಕೆ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಹಣ ಬಿಡುಗಡೆ ಮಾಡದಿರುವುದನ್ನು ವಿರುದ್ಧ ಪಕ್ಷಗಳು ವ್ಯಾಪಕವಾಗಿ ಟೀಕೆ ಮಾಡಿದೆ.
ರಾಜ್ಯಕ್ಕೆ ಅನುದಾನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೋನಾ ಬಿಕ್ಕಟ್ಟಿನ ವೇಳೆ ನೆರವಾಗಲು 14 ರಾಜ್ಯಗಳಿಗೆ ಕೇಂದ್ರ ಸರ್ಕಾರ ₹ 6,195 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ನಯಾಪೈಸೆ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸಿದೆ. ಕೋವಿಡ್ ಹಣದಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯದ ಪರವಾಗಿ ಕೆಲಸ ಮಾಡಲು ವಿಫಲರಾಗಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಅನುದಾನಗಳ ಬಗ್ಗೆ ನೊಜವಾಗಿ ಮಾತನಾಡಬೇಕಾದ ಸಂಸದರು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕೂತಿದ್ದಾರೆ. ಬಿಜೆಪಿಯ 25 ಸಂಸದರು ಗೊಡ್ಡು ದನಗಳಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ನಲ್ಲಿ ಮೊದಲ ಹಂತವಾಗಿ ಕೋವಿಡ್ ನಿಭಾಯಿಸಲು ಎಸ್ಡಿಆರ್ಎಂಎಫ್ ಅಡಿ ₹11,000 ಕೋಟಿ ಬಿಡುಗಡೆ ಮಾಡಿದ್ದು ಕರ್ನಾಟಕಕ್ಕೆ ₹396 ಕೋಟಿ, ಮಹಾರಾಷ್ಟ್ರಕ್ಕೆ ₹1611 ಕೋಟಿ, ರಾಜಸ್ಥಾನಕ್ಕೆ ₹704 ಕೋಟಿ, ಬಿಹಾರ ₹700 ಕೋಟಿ, ಗುಜರಾತ್ ₹600 ಕೋಟಿ, ಆಂಧ್ರ ₹559 ಕೋಟಿ, ತಮಿಳುನಾಡಿಗೆ ₹510 ಕೋಟಿ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲೂ ರಾಜ್ಯಕ್ಕೆ ಅಲ್ಪ ಮೊತ್ತ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.