ಮುಂಬೈ, ಮೇ 13 (DaijiworldNews/PY) : ವಂದೇ ಮಾತರಂ ಮಿಷನ್ ಅಡಿಯಲ್ಲಿ ಮಲೇಷ್ಯಾದ ಕ್ವಾಲಾಲಂಪುರದಿಂದ ಸುಮಾರು 225 ಭಾರತೀಯರನ್ನು ಒಳಗೊಂಡಿರುವ ಏರ್ ಇಂಡಿಯಾ ವಿಮಾನವು ಬುಧವಾರ ಬೆಳಿಗ್ಗೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಕತಾರ್ನ ದೋಹಾದಿಂದ ಭಾರತೀಯರನ್ನು ಒಳಗೊಂಡ ಏರ್ ಇಂಡಿಯಾ ಎಕ್ಸ್ಪ್ರೆಸ್ ಕೇರಳದ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ತಲುಪಿದೆ.
ಮಂಗಳವಾರ ಏರ್ ಇಂಡಿಯಾ ಮೂಲಕ ಬಾಂಗ್ಲಾದೇಶದಲ್ಲಿದ್ದ 169 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ವಂದೇ ಮಾತರಂ ಮಿಷನ್ ಪ್ರಾರಂಭವಾದ ನಂತರ ಇಲ್ಲಿಯವರೆಗೆ ಏರ್ ಇಂಡಿಯಾ ವಿಮಾನಗಳ ಮೂಲಕ ಸುಮಾರು 6,037 ಭಾರತೀಯರನ್ನು ವಾಪಾಸ್ ಕರೆಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಈ ಕಾರ್ಯಾಚರಣೆಯು ಮೇ 7ರಂದು ಪ್ರಾರಂಭಗೊಂಡಿದೆ.
ಕಾರ್ಯಾಚರಣೆಗೆ ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ನ 64 ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 14,800 ಭಾರತೀಯರನ್ನು ಅಮೆರಿಕ, ಬ್ರಿಟನ್, ಬಾಂಗ್ಲಾದೇಶ, ಸಿಂಗಾಪುರ, ಸೌದಿ ಅರೇಬಿಯಾ, ಕುವೈರ್, ಫಿಲಿಫೈನ್ಸ್, ಯುಎಇ ಹಾಗೂ ಮಲೇಷ್ಯಾದಿಂದ ಕರೆತರಲಾಗುತ್ತಿದೆ.