ಲಕ್ನೋ, ಮೇ 13 (DaijiworldNews/PY) : ಆಗ್ರಾದ ಕೇಂದ್ರ ಕಾರಾಗೃಹದ 10 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಜೈಲಿನ ಹಿಂಭಾಗದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಆಗ್ರಾ ಜಿಲ್ಲಾಧಿಕಾರಿ ಪಿ.ಎನ್.ಸಿಂಗ್ ಹೇಳಿದ್ದಾರೆ.
12 ಕೈದಿಗಳ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 10 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೈಲಿನ ಹಿಂಭಾಗದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೈಲಿನಲ್ಲಿರುವ ಎಲ್ಲಾ 1350 ಕೈದಿಗಳನ್ನು ಹಾಗೂ 112 ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
60 ವರ್ಷದ ಕೈದಿಯೊಬ್ಬರಿಗೆ ಮೇ 6ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಆ ಕೈದಿಯನ್ನು ಕಳೆದ ಶುಕ್ರವಾರದಂದು ತೀವ್ರ ಅನಾರೋಗ್ಯದ ಕಾರಣದಿಂದ ಎಸ್.ಎನ್.ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಆ ವ್ಯಕ್ತಿ ಮೆದುಳು ನಿಷ್ಕ್ರೀಯಗೊಂಡು ಮೃತಪಟ್ಟರು ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಕೊರೊನಾ ಸೋಂಕು ದೃಢಪಟ್ಟಿರುವ ಎಲ್ಲಾ ಕೈದಿಗಳ ಆಪ್ತರು ಹಾಗೂ ಅವರ ಸಂಪರ್ಕಕ್ಕೆ ಬಂದಿರುವ ಸಿಬ್ಬಂದುಗಳನ್ನೂ ಕೂಡಾ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೈಲಿಗೆ ಮಾರ್ಚ್ 15ರ ಬಳಿಕ ಭೇಟಿ ನೀಡುವವರು ಹಾಗೂ ಕೈದಿಗಳ ಕುಟುಂಬವರು ಭೇಟಿ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಹೇಗೆ ಕೈದಿಗೆ ಸೋಂಕು ತಗುಲಿದ್ದು ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಈ ವಿಚಾರದ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ಜೈಲು ಅಧಿಕಾರಿ ಪಿ.ಎನ್.ಸಿಂಗ್ ಹೇಳಿದ್ದಾರೆ.