ನವದೆಹಲಿ, ಮೇ 13 (DaijiworldNews/PY) : ಕೊರೊನಾ ಸೋಂಕಿಗೆ ಅಮೆರಿಕದ ಗಿಲ್ಯಾಡ್ ಸೈನ್ಸ್ಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ದಿಪಡಿಸಿದ ರೆಮ್ಡಿಸಿಮೆರ್ ಔಷಧಿ ಮಾರಾಟಕ್ಕೆ ಸಂಬಂಧಪಟ್ಟಂತೆ ಪರವಾನಗಿ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ತಿಳಿಸಿದೆ. ಭಾರತವೂ ಸೇರಿ 127 ದೇಶಗಳಲ್ಲಿ ಈ ಔಷಧಿ ಮಾರಾಟ ಮಾಡುವ ನಿಟ್ಟಿನಲ್ಲಿಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಔಷಧಿಯನ್ನು ಕೊರೊನಾ ಚಿಕಿತ್ಸೆಗೆ ಉಪಯೋಗಿಸಲು ಮೇ ಪ್ರಾರಂಭದಲ್ಲಿ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ(ಎಫ್ಡಿಎ) ಅನುಮತಿ ನೀಡಿತ್ತು.
ಈ ಔಷಧಿಯ ಉತ್ಪಾಧನೆ ಹಾಗೂ ಕಡಿಮೆ, ಮಧ್ಯಮ ಪ್ರಮಾಣದ ಆದಾಯ ಹಾಗೂ ಕೆಲವು ಹೆಚ್ಚು ಆದಾಯ ಹೊಂದಿರುವ ದೇಶಗಳಲ್ಲಿ ಮಾರಾಟ ಮಾಡಲು ಜುಬಿಲೆಂಟ್ಗೆ ಈ ಒಪ್ಪಂದಿಂದ ಹಕ್ಕು ದೊರೆತಿದೆ.
ಈ ನಡುವೆ, ರೆಮ್ಡಿಸಿಮೆರ್ ಉತ್ಪಾದನೆಗಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ದೀರ್ಘಾವಧಿಯ ಪರವಾನಿಗೆಗಾಗಿ ಭಾರತ ಹಾಗೂ ಪಾಕಿಸ್ತಾನದ ಔಷಧಿ ತಯಾರಿತರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ತಂತ್ರಜ್ಞಾನವನ್ನೂ ಉತ್ಪಾದನೆಗೆ ನೆರವಾಗುವ ಸಲುವಾಗಿ ಕಲ್ಪಿಸಲಾಗುವುದು ಎಂದು ಗಿಲ್ಯಾಡ್ ಸೈನ್ಸಸ್ ಇಂಕ್ ತಿಳಿಸಿದೆ.
ಈವರೆಗೂ ಕೊರೊನಾ ಸೋಂಕಿಗೆ ಯಾವುದೇ ಅನುಮೋದಿತ ಚಿಕಿತ್ಸಾ ವಿಧಾನ ಇಲ್ಲದ ಕಾರಣ ಚಿಕಿತ್ಸೆಗೆ ರೆಮ್ಡಿಸಿಮೆರ್ ಬಳಕೆಯ ಬಗ್ಗೆ ಒಲವು ಹೆಚ್ಚುತ್ತಿದ್ದು, ಹಾಗಾಗಿ ಕಂಪೆನಿಯು ಔಷಧಿಯ ಸೀಮಿತ ಪೂರೈಕೆ, ದರ ನಗದಿಯ ವಿಚಾರವಾಗಿ ಗಮನಹರಿಸಿದೆ ಎನ್ನಲಾಗಿದೆ.
ಇದೇ ಜುಬಿಲೆಂಟ್ ಕಂಪೆನಿಗೆ ನಂಜನಗೂಡನಲ್ಲಿ ಕಾರ್ಯನಿರ್ವಹಿಸುತ್ತಿರುವ ಔಷಧಿ ತಯಾರಿಕಾ ಕಾರ್ಖಾನೆಯೂ ಸೇರಿದ್ದಾಗಿದೆ.
ಔಷಧಿ ಮಾರಾಟಕ್ಕೆ ಅಮೆರಿಕದ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಜುಬಿಲೆಂಟ್ನ ಷೇರು ಮೌಲ್ಯ ಹೆಚ್ಚಾಗಿದೆ. ಮುಂಬೈ ಷೇರುಪೇಟೆಯಲ್ಲಿ ನಿನ್ನೆಯ ವಹಿವಾಟಿನ ಕೊನೆಯಲ್ಲಿ 409.50 ಇದ್ದ ಜುಬಿಲೆಂಟ್ ಷೇರು ಮೌಲ್ಯ ಇಂದು 429.95 ಆಗಿದೆ. ಇಂದು ಎನ್ಎಸ್ಇಯಲ್ಲಿ ಜುಬಿಲೆಂಟ್ ಷೇರು ಮೌಲ್ಯ 428.55 ದ್ದು, ನಿನ್ನೆಯ ವಹಿವಾಟಿನ ಕೊನೆಯಲ್ಲಿ ಇದು 408.15 ಇತ್ತು.