ಹೈದರಾಬಾದ್, ಮೇ 13 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿದ್ದ ಒಡಿಶಾದ 21 ವರ್ಷದ ಕಾರ್ಮಿಕನೊಬ್ಬ ತನ್ನ ಊರಿಗೆ ಹೋಗಲೆಂದು ತೆಲಂಗಾಣದಿಂದ 300 ಕಿ.ಮೀ ದೂರ ನಡೆದು ಬಿಸಿಲಿನಿಂದ ಬಸವಳಿದು ಸಾವನ್ನಪ್ಪಿದ್ದಾನೆ.
ತೆಲಂಗಾಣದಿಂದ ತನ್ನ ಸ್ನೇಹಿತರೊಂದಿಗೆ ಕಾಲ್ನಡಿಗೆಯಲ್ಲಿ ಒಡಿಶಾದ ಮಲ್ಕಂಗಿರಿ ಜಿಲ್ಲೆಗೆ ತೆರಳಿದ್ದು ಭದ್ರಾಚಲಂ ತಲುಪಿದಾಗ ಕಾರ್ಮಿಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವಾಂತಿ ಮಾಡಿಕೊಂಡು ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ ಎಂದು ಸ್ನೇಹಿತರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತರು ಸೋಮವಾರ ಮಧ್ಯಾಹ್ನದಿಂದ ಏನನ್ನೂ ತಿಂದಿರಲಿಲ್ಲ ಎಂದು ತಿಳಿಸಿದ್ದು ಆಸ್ಪತ್ರೆಯ ವೈದ್ಯರು ಕಾರ್ಮಿಕ ಬಿಸಿಲಿನ ತೀವ್ರತೆಗೆ ಬಳಲಿ ಮೃತಪಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಕಾರ್ಮಿಕನ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಮೃತದೇಹವನ್ನು ಮಲ್ಕಂಗಿರಿಗೆ ಕೊಂಡೊಯ್ಯಲು ವಾಹನ ವ್ಯವಸ್ಥೆ ಮಾಡಿದ್ದಾರೆ.