ನವದೆಹಲಿ, ಮೇ 13 (DaijiworldNews/PY) : ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ಹಾಗೂ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
ಲಾಕ್ಡೌನ್ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ನಿನ್ನೆ ಪ್ರಧಾನಿ ಮೋದಿ ಅವರು ಸಮಾಜದ ವಿವಿಧ ವರ್ಗಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಅದರ ಮಾಹಿತಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಆರ್ಥಿಕ ಪ್ಯಾಕೇಜ್ ಸ್ವಾವಲಂಭಿ ಭಾರತವನ್ನು ನಿರ್ಮಿಸಲಿದೆ ಎಂದು ತಿಳಿಸಿದರು.
ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುತ್ತಿದ್ದು, ಇದರಿಂದಾಗಿ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳು ಸಾಲ ಪಡೆಯಲು ಅಕ್ಟೋಬರ್ 31ರ ವರೆಗೆ ಅವಕಾಶ ನೀಡಲಾಗಿದೆ. ಈ ಕಂಪೆನಿಗಳು ಪಡೆದುಕೊಳ್ಳವುಸ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಸಾಲದ ಮರುಪಾವತಿಗಾಗಿ ನಾಲ್ಕು ವರ್ಷ ಕಾಲಾವಕಾಶ ನೀಡಲಾಗಿದ್ದು, ಇಎಂಐ ವಿನಾಯಿತಿಯನ್ನು ಒಂದು ವರ್ಷದವರೆಗೆ ನೀಡಲಾಗುವುದು. 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡಲಾಗುವುದು ಎಂದರು.
15 ಸಾವಿರ ರೂಪಾಯಿ ಒಳಗಿನ ವೇತನದಾರರಿಗೆ ತಕ್ಷಣ ಇಪಿಎಫ್ ವಾಪಸ್ ನೀಡಲಾಗುವುದು. ಇಪಿಎಫ್ ಹಣವನ್ನು ಆಗಸ್ಟ್ವರೆಗೆ ಸರ್ಕಾರವೇ ಪಾವತಿಸಲಿದೆ ಎಂದು ತಿಳಿಸಿದರು.