ನವದೆಹಲಿ, ಮೇ 14 (Daijiworld News/MSP): ಭಾರತೀಯ ರೈಲ್ವೆಯೂ, ಮುಂದಿನ ಸೂಚನೆಯವರೆಗೆ ತನ್ನ ಎಲ್ಲಾ ಪ್ರಯಾಣಿಕರ ರೈಲುಗಳು ಸ್ಥಗಿತಗೊಳಿಸಿದ್ದು, ಜೂನ್ 30 ರಂದು ಅಥವಾ ಅದಕ್ಕೂ ಮೊದಲು ಪ್ರಯಾಣಿಸಲು ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳನ್ನು ಭಾರತ ರೈಲ್ವೆ ರದ್ದುಪಡಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಶ್ರಮಿಕ್ ಸ್ಪೆಷಲ್ ಮತ್ತು 30 ವಿಶೇಷ ರೈಲುಗಳನ್ನು ಹೊರತುಪಡಿಸಿ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ಅಮಾನತಿನಲ್ಲಿರಿಸಿದ್ದು, ರದ್ದಾದ ಈ ರೈಲುಗಳಿಗಾಗಿ ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ದೇಶದಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ರೈಲ್ವೆ ಮಾರ್ಚ್ 22 ರಿಂದ ಪ್ರಯಾಣಿಕರ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಭಾರತೀಯ ರೈಲ್ವೆಯೂ "ವಿಶೇಷ ರೈಲು"ಗಳಿಗೆ ಮುಂಗಡ ಬುಕಿಂಗ್ ಪ್ರಾರಂಭಿಸಿದಾಗ ಪ್ರಯಾಣಿಕರು ಸೋಮವಾರ 45,000 ಟಿಕೆಟ್ಗಳನ್ನು ಖರೀದಿಸಿದ್ದರು. ಮೇ 18 ರವರೆಗೆ ಮುಂಬೈ ಸೆಂಟ್ರಲ್-ನವದೆಹಲಿ ವಿಶೇಷ ರೈಲಿನ ಎಲ್ಲಾ ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿತ್ತು.
ಭಾರತೀಯ ರೈಲ್ವೆ, ದೆಹಲಿ ಮತ್ತು ಭಾರತದ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ 30 ವಿಶೇಷ ರೈಲುಗಳ ಸೇವೆ ಆರಂಭಿಸಿದೆ. ನವದೆಹಲಿ ನಿಲ್ದಾಣದಿಂದ ದಿಬ್ರುಗ. ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ಕಾಶ್ಮೀರದ ತನಕ ಸಂಚಾರ ನಡೆಸಲಿದೆ.
ಈ ವಿಶೇಷ ರೈಲಿನಲ್ಲಿ ಪ್ರಯಾಣಿಸಲು ಭಾರತೀಯ ರೈಲ್ವೆಯ ಐಆರ್ಸಿಟಿಸಿ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಮಾನ್ಯತೆ ಹೊಂದಿದ ದೃಢಪಡಿಸಲಾದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಯಾವುದೇ ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ನೀಡಲಾಗುವುದಿಲ್ಲ.ಅಲ್ಲದೆ ಪ್ರಯಾಣಿಕರು ಆರೋಗ್ಯ ಸೇತು ಆಪ್ ಸಹಿತ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.