ಕೋಲಾರ ಕೆಜಿಎಫ್, ಮೇ 14 (Daijiworld News/MB) : ಮಾರಿಕುಪ್ಪಂನ ಬಿಜಿಎಂಎಲ್ನ ಮುಚ್ಚಿದ್ದ ಗಣಿಯೊಳಗೆ ಇಳಿಯಲು ಯತ್ನಿಸಿ ಮೂವರು ಸಾವನ್ನಪ್ಪಿದ್ದು ಈವರೆಗೂ ಇಬ್ಬರ ಶವವನ್ನು ಹೊರತೆಗೆಯಲಾಗಿದೆ. ಇನ್ನೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿ ತಿಳಿಸಿದೆ.
ಮೃತರನ್ನು ಆಂಡರಸನ್ಪೇಟೆಯ ಕಂದ, ಜೋಸೆಫ್ ಮತ್ತು ಪಡಿಯಪ್ಪ ಎಂದು ಗುರುತಿಸಲಾಗಿದ್ದು ಈ ಪೈಕಿ ಪಡಿಯಪ್ಪ ಅವರೆ ಶವದ ಹುಡುಕಾಟ ನಡೆಯುತ್ತಿದೆ. ಮೃತ ಕಂದ ಮತ್ತು ಜೋಸೆಫ್ ಅವರ ಶವವನ್ನು ಕೋಲಾರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಅಸ್ವಸ್ಥರಾಗಿರುವ ಚಾಮರಾಜಪೇಟೆ ನಿವಾಸಿ ವಿಕ್ಟರ್ ಮತ್ತು ಕಾರ್ತಿಕ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮೈಸೂರು ಮೈನ್ಸ್ ಇನ್ಕ್ಲೈನ್ ಶಾಫ್ಟ್ನಲ್ಲಿ ಕಳ್ಳತನಕ್ಕಾಗಿ ಯತ್ನಿಸಿದ್ದು ಎಂದು ಶಂಕಿಸಲಾಗಿದ್ದುಮಿಥಾಲಿನ್ ಅಥವಾ ಕಾರ್ಬನ್ ಮಾನಾಕ್ಸೈಡ್ ಅನಿಲ ಉಸಿರಾಡಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ಸುಮಾರು1500 ಅಡಿ ಆಳದಲ್ಲಿ ಶವ ಇರಬಹುದು ಎಂದು ಹೇಳಲಾಗಿದೆ.
ಇವರು ರಾತ್ರಿ ಸುಮಾರು 9 ಗಂಟೆಗೆ ಗಣಿಗೆ ಇಳಿದಿದ್ದರು ಎಂದು ಹೇಳಲಾಗಿದ್ದು ನಡುರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆಯೂ ಆರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಳಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಂಡು ಬಂದ ಕಾರಣ ಸದ್ಯ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.