ಬೆಂಗಳೂರು, ಮೇ 14 (Daijiworld News/MSP): ಕರ್ನಾಟಕದಲ್ಲಿ ಕೊರೊನಾ ಹರಡುವಿಕೆ ವೇಗ ಪಡೆದುಕೊಂಡಂತೆ ಕಾಣಿಸಿಕೊಳ್ಳುತ್ತಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಮತ್ತೆ 22 ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 981ಕ್ಕೆ ತಲುಪಿದ್ದು ಸಾವನ್ನಪ್ಪಿರುವವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯ ಆರೋಗ್ಯ ಇಲಾಖೆಯ ಮಧ್ಯಾಹ್ನದ ಬುಲೆಟಿನ್ ಪ್ರಕಾರ , ಗುರುವಾರ ಬೆಂಗಳೂರಿನಲ್ಲಿ 60 ವರ್ಷದ ಪುರುಷ ಹಾಗೂ ಮಂಗಳೂರಿನ 80 ವರ್ಷದ ಮಹಿಳೆಯೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆಯಿಂದ ಇಂದಿನ ಮಧ್ಯಾಹ್ನದವರೆಗೆ ಐವರು ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಡನೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 456ಕ್ಕೆ ತಲುಪಿದೆ.
ಇನ್ನು ಬೆಂಗಳೂರು ಪಾದರಾಯನಪುರದ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದಲ್ಲದೆ ಮಂಡ್ಯ, ಬೀದರ್, ಗದಗ ಜಿಲ್ಲೆಗಳಲ್ಲಿ ತಲಾ ನಾಲ್ಕು, ದಾವಣಗೆರೆಯಲ್ಲಿ ಮೂವರು, ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.