ತುಮಕೂರು, ಮೇ 14 (Daijiworld News/MB) : ತುಮಕೂರಿನ ಸೀಲ್ಡೌನ್ ಆದ ಪ್ರದೇಶದಲ್ಲಿ ಕಳೆದ ಮಂಗಳವಾರ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಎಂಬವರು ಮೃತಪಟ್ಟಿದ್ದು ಅಂತ್ಯಕ್ರಿಯೆ ನಡೆಸಲಾಗದೆ ಸಂಕಷ್ಟದಲ್ಲಿದ್ದ ಅವರ ಕುಟುಂಬಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಇವರ ಸಹಾಯಕ್ಕೆ ನಿಂತು ಮಾನವೀಯತೆ ಮೆರೆದಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೃತ ಹೆಚ್ ಎಸ್ ನಾರಾಯಣ ರಾವ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದು ಆರ್ಥಿಕವಾಗಿ ತೀರಾ ಬಡ ಕುಟುಂಬದವರಾಗಿದ್ದಾರೆ. ಇವರ ಸಹಾಯಕ್ಕೆ ನಿಂತು ಮೃತರ ಕುಟುಂಬಕ್ಕೆ ಧೈರ್ಯ ತುಂಬಿದ ಮುಸ್ಲಿಂ ಯುವಕರ ಗುಂಪು 5 ಸಾವಿರ ರೂಪಾಯಿ ಸಂಗ್ರಹಿಸಿ ನಾರಾಯಣ ರಾವ್ ಅವರ ಅತ್ಯಕ್ರಿಯೆಗೆ ತಯಾರಿ ಮಾಡಿದ್ದಾರೆ.
ಇನ್ನು ಈ ಪ್ರದೇಶ ಸೀಲ್ಡೌನ್ ಆಗಿರುವ ಕಾರಣದಿಂದಾಗಿ ಮೃತ ನಾರಾಯಣ ರಾವ್ ಅವರ ಸಂಬಂಧಿಕರು ಯಾರೂ ಕೂಡಾ ಬರಲಾಗದದಿದ್ದು ಅಂತ್ಯಕ್ರಿಯೆ ತಾವೇ ನಿಭಾಯಿಸುವ ಜವಾಬ್ದಾರಿಯನ್ನೂ ಹೊತ್ತುಕೊಂಡ ಈ ಯುವಕರ ಗುಂಪು ಪ್ರದೇಶದ ಕಾರ್ಪೊರೇಟರ್ ನಯಾಝ್ ಅಹ್ಮದ್ ಅವರ ಸಹಾಯದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ.
ಸೀಲ್ಡೌನ್ ಆಗಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಕಾರಣದಿಂದಾಗಿ ಮೃತರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ನೆಗೆಟಿವ್ ಬಂದಿದೆ.