ನವದೆಹಲಿ, ಮೇ 14 (Daijiworld News/MSP): ಒಂದು ವಾರದ ಒಳಗಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡುವ 4 ರೀತಿ ಆಯುರ್ವೇದ ಔಷಧಗಳ ಕ್ಲಿನಿಕಲ್ ಟ್ರಯಲ್ ಆರಂಭಿಸುವುದಾಗಿ ಆಯುಷ್ ಮಂತ್ರಿ ಶ್ರೀಪಾದ್ ನಾಯಕ್ ಟ್ವೀಟ್ ಮಾಡಿದ್ದಾರೆ.
ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ದೇಶದ ಸಾಂಪ್ರದಾಯಿಕ ಔಷಧವಾಗಿದೆ . ಆಯುಷ್ ಸಚಿವಾಲಯ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸಹಯೋಗದಲ್ಲಿ ಸಂಶೋಧನೆ ನಡೆಸಿ ನಾಲ್ಕು ಔಷಧಿಗಳು ಸಿದ್ದವಾಗಿದ್ದು ಕೊರೊನಾ ವಿರುದ್ಧ ಹೊರಡಲು ಸಾಂಪ್ರದಾಯಿಕ ಔಷಧಗಳ ಪ್ರಾಯೋಗಿಕ ಪರೀಕ್ಷೆಯ ಆರಂಭವಾಗಲಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಗುಣಮುಖರಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.
"ಈ ಪ್ರಯೋಗಗಳ ಫಲಿತಾಂಶ ಮೂರು ತಿಂಗಳಲ್ಲಿ ಬರಲಿದೆ" ಎಂದು ಸಿಎಸ್ಐಆರ್ ಮಹಾನಿರ್ದೇಶಕ ಶೇಖರ್ ಮಾಂಡೆ ಮತ್ತು ಆಯುಷ್ ಕಾರ್ಯದರ್ಶಿ ಡಾ. ರಾಜೇಶ್ ಕೋಟೆಚಾ ತಿಳಿಸಿದ್ದಾರೆ.
ಇದು ಜೀವಮಾನದ ಒಂದು ಬಹುದೊಡ್ಡ ಅವಕಾಶವಾಗಿದೆ, ಈ ರೀತಿಯ ಅಧ್ಯಯನವು ನಮ್ಮ ದೇಶದಲ್ಲಿ ಎಂದಿಗೂ ಸಂಭವಿಸಿಲ್ಲ. ಅಶ್ವಗಂಧ, ಯಷ್ಟಿಮಧು (ಮುಲೇತಿ), ಗುಡುಚಿ ಮತ್ತು ಪಿಪ್ಪಾಲಿ (ಗಿಲೋಯ್) ಹಾಗೂ ಆಯುಷ್ -64( ಮಲೇರಿಯಾ ಚಿಕಿತ್ಸೆ ಸಿದ್ದಪಡಿಸಲಾದ ಔಷಧ) ವಿವಿಧ ಕಾಂಬಿನೇಷನ್ ಗಳನ್ನು ಪರೀಕ್ಷೆ ನಡೆಸಲಾಗುತ್ತದೆ. ಮುಂಬರುವ ವಾರದ ಆರಂಭದಲ್ಲಿ ನಾವು ಈ ಅಧ್ಯಯನವನ್ನು ಪ್ರಾರಂಭಿಸುತ್ತಿದ್ದೇವೆ" ಕೊಟೇಚಾ ಹಾಗೂ ಮಾಂಡೆ ತಿಳಿಸಿದ್ದಾರೆ.