ನವದೆಹಲಿ, ಮೇ 14 (DaijiworldNews/PY) : ನಾಲ್ಕನೇ ಹಂತದ ಲಾಕ್ಡೌನ್ ಅನುಷ್ಠಾನಕ್ಕೂ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದು, ಲಾಕ್ಡೌನ್ ವಿನಾತಿಯಿತಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಸಲಹೆ ಪಡೆದು ಜಾರಿಗೆ ತರುವ ಪ್ರಯತ್ನವನ್ನು ಆರಂಭಿಸಿದ್ದಾರೆ.
ಈ ವಿಚಾರದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಆನ್ಲೈನ್ ಮೂಲಕ ಇಲ್ಲಿಯವರೆಗೆ 5 ಲಕ್ಷ ಮಂದಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾಲ್ಕನೇ ಹಂತದ ಲಾಕ್ಡೌನ್ ಸಂದರ್ಭ ಮನೆಯಿಂದ ಹೊರ ಬರುವ ಸಂದರ್ಭ ಜನರು ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಬೇಕೆಂದು ಹೆಚ್ಚಿನ ಪ್ರಮಾಣದಲ್ಲಿ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜನರು ಸ್ಪಾ, ಸೆಲೂನ್, ಶಾಲಾ-ಕಾಲೇಜು, ಸ್ವಿಮ್ಮಿಂಗ್ ಫೂಲ್, ಮಾಲ್ಗಳನ್ನು ಬಂದ್ ಮುಂದುವರೆಸುವಂತೆ ಜನರು ಮನವಿ ಮಾಡಿಕೊಂಡಿದ್ದಾರೆ. ಹೊಟೇಲ್ಗಳ ಬಂದ್ ಕೂಡಾ ಮುಂದುವರೆಯಲಿ. ಆದರೆ, ರೆಸ್ಟೋರೆಂಟ್ಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವಂತೆ ದೆಹಲಿ ಜನತೆ ಕೇಳಿಕೊಂಡಿದ್ದಾರಂತೆ. ದೆಹಲಿಯಲ್ಲಿ ಸಮ-ಬೆಸ ಮಾದರಿಯಂತೆ ಮಾರ್ಕೇಟ್ಗಳನ್ನು ತೆರೆಯುವಂತೆ ಕೆಲವು ಜನರು ಮನವಿ ಮಾಡಿಕೊಂಡಿದ್ದಾರೆ.
ನಾಲ್ಕನೇ ಹಂತದ ಲಾಕ್ಡೌನ್ ವಿನಾಯಿತಿಯಲ್ಲಿ ಹಲವು ಅಂಗಡಿಗಳು, ಕಚೇರಿಗಳು ತೆರವುಗೊಂಡಿದ್ದು, ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿರುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಮೆಟ್ರೋ, ಬಸ್ ಸಂಚಾರವನ್ನು ಪ್ರಾರಂಭಿಸಲು ದೆಹಲಿ ಜನತೆ ಮನವು ಮಾಡಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈ ಸಲಹೆಗಳನ್ನು ಕಳುಹಿಸಲಾಗುತ್ತದೆ. ಇದರೊಂದಿಗೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.