ನವದೆಹಲಿ, ಮೇ 14 (Daijiworld News/MB) : ನೈಋತ್ಯ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಲ್ಲಿ ಇರುವ ಭಾರತದ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತಾಗಿ ಬ್ರಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಏತನ್ಮಧ್ಯೆ ನೀರವ್ ಮೋದಿಯನ್ನು "ಉಳಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ" ಎಂದು ಬಿಜೆಪಿ ಆರೋಪ ಮಾಡಿದೆ.
ಈ ಕುರಿತಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್, 2018 ರಲ್ಲಿ ತಿಪ್ಸೆ ಕಾಂಗ್ರೆಸ್ ಸೇರಿದ್ದರು ಮತ್ತು ಪಕ್ಷದ ಉನ್ನತ ನಾಯಕರಾದ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ಅಶೋಕ್ ಚವಾಣ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್ ನೀರವ್ ಮೋದಿಯನ್ನು ಉಳಿಸಲು ಹಾಗೂ ಜಾಮೀನು ನೀಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂಬುದನ್ನು ನಾವು ಊಹೆ ಮಾಡಬಹುದು. ಈ ಅನುಮಾನಕ್ಕೆ ಹಲವು ಕಾರಣಗಳಿದ್ದು ಭಾರತೀಯ ತನಿಖಾ ಸಂಸ್ಥೆಗಳು ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಮುಂಬೈ ಮತ್ತು ಅಲಹಾಬಾದ್ ಹೈಕೋರ್ಟ್ಗಳ ಮಾಜಿ ನ್ಯಾಯಾಧೀಶ ಅಭಯ್ ತಿಪ್ಸೆ ನೀರವ್ ಮೋದಿಯವರ ಪರ ವಕೀಲರಂತೆ ವರ್ತನೆ ಮಾಡಿದ್ದಾರೆ. ತಿಪ್ಸೆ ಪ್ರಕಾರವಾಗಿ ಬ್ರಿಟ್ನ್ನಲ್ಲಿ ನೀರವ್ ಮೋದಿ ವಿರುದ್ಧವಾಗಿ ದಾಖಲಾಗಿರುವ ಮೋಸ ಹಾಗೂ ಕ್ರಿಮಿನಲ್ ಪಿತೂರಿ ಆರೋಪ ಭಾರತೀಯ ಕಾನೂನಿನಡಿಯಲ್ಲಿ ಬರುವುದಿಲ್ಲ. ಕಾಂಗ್ರೆಸ್ನ ಆಜ್ಞೆಯಂತೆ ತಿಪ್ಸೆ ನಡೆಯುತ್ತಿದ್ದಾರೆ. ಅಷ್ಟಕ್ಕೂ ಕಾನೂನು ಕ್ಷೇತ್ರದಲ್ಲಿ ತಿಪ್ಸೆ ಹೆಸರುವಾಸಿಯಾಗಿಲ್ಲ ಎಂದು ಟೀಕೆ ಮಾಡಿದ್ದಾರೆ.
ನೀರವ್ ಮೋದಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಭಾರತದಿಂದ ಪರಾರಿಯಾಗಿದ್ದರೂ ಕೂಡಾ ಅವರ ಹೆಚ್ಚಿನ ಪ್ರಕರಣಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಆಳ್ವಿಕೆ ಮಾಡುತ್ತಿದ್ದ ಸಂದರ್ಭದ್ದಾಗಿದೆ. ಈ ಉದ್ಯಮಿಯ ಆಸ್ತಿಯನ್ನು ನರೇಂದ್ರ ಮೋದಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು ಅವುಗಳನ್ನು ಹರಾಜು ಮಾಡಿದೆ. ಹಾಗೆಯೇ ಭಾರತದಲ್ಲಿ ಅವರನ್ನು ನ್ಯಾಯಾಲಯದ ಕಟಕಟೆಗೆ ತರಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ನೀರವ್ ಮೋದಿ ನೈಋತ್ಯ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಲ್ಲಿ ಇದ್ದಾರೆ.