ನವದೆಹಲಿ, ಮೇ 14 (DaijiworldNews/PY) : ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಯುವಜನರಲ್ಲಿರುವ ದೇಶಭಕ್ತಿಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು 3 ವರ್ಷಗಳ ಅವಧಿಗೆ ಸೇನಾಪಡೆಗಳೊಂದಿಗೆ ಪ್ರಾಯೋಗಿಕವಾಗಿ ಅನುಭವ ಪಡೆಯಲು ಇಂಟರ್ನ್ಷಿಪ್ ಮೂಲಕ ಅವಕಾಶ ನೀಡಲು ಸೇನೆ ತೀರ್ಮಾನಿಸಿದೆ.
ಯೋಧರು ಹಾಗೂ ಅಧಿಕಾರಿಗಳಾಗಿಯೂ ಇಂಟರ್ನ್ಷಿಪ್ ಪಡೆದುಕೊಳ್ಳುವ ಅವಕಾಶವಿದೆ. ಇಂಟರ್ನ್ಷಿಪ್ಗಾಗಿ ಬರುವವರಿಗೆ ಕೊಡುವ ಸ್ಟೇಫಂಡ್ ವಿಚಾರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಂಟರ್ನ್ಷಿಪ್ಗೆ ಸೇನೆಯ ಎಲ್ಲಾ ಕಾರ್ಯಾಚರಣೆ ಹಾಗೂ ಸಂಘರ್ಷದ ತುಕಡಿಗಳಲ್ಲಿ ಅವಕಾಶ ದೊರಕಲಿದೆ.
ಕಠಿಣ ತರಬೇತಿಯ ಬಳಿಕ 3 ವರ್ಷಗಳ ಅವಧಿಗೆ ಸೇನೆಯಲ್ಲಿ ಇಂಟರ್ನ್ಷಿಪ್ ಮಾಡುವವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ಯೋಗದಲ್ಲಿ ಆದ್ಯತೆ ದೊರಕಬೇಕು. ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಲು ಬಯಸುವವರಿಗೆ ಮೀಸಲಾತಿ ಸಿಗಬೇಕು ಎಂದು ಸರ್ಕಾರಕ್ಕೆ ಸೇನೆ ಶಿಫಾರಸು ಮಾಡುವ ಸಾಧ್ಯತೆಯಿದೆ.
ಸೇನೆಯ ಉನ್ನತ ಅಧಿಕಾರಿಗಳು ಇಂತಹ ಒಂದು ಪ್ರಸ್ತಾಪವನ್ನು ಸಿದ್ದಪಡಿಸಿರುವುದು ನಿಜವಾಗಿದ್ದು, ಈ ವಿಚಾರವು ಶೀಘ್ರದಲ್ಲೇ ನಡೆಯಲಿರುವ ಕಮಾಂಡರ್ ಸಭೆಯಲ್ಲಿ ವಿವರವಾಗಿ ಚರ್ಚೆಯಾಗಲಿದೆ. ಇಂಟರ್ನ್ಷಿಪ್ನಲ್ಲಿ ಮೊದಲು 100 ಅಧಿಕಾರಿಗಳು ಹಾಗೂ 1000 ಯೋಧರಿಗೆ ಅವಕಾಶ ಕಲ್ಪಸಬೇಕೆಂಬ ಚಿಂತನೆಯಿದೆ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.
ಕೇಂದ್ರಿಯ ಮೀಸಲು ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ತುಕಡಿಗಳಿಂದಲೂ ಸಿಬ್ಬಂದಗಳನ್ನು ಇದೇ ರೀತಿಯಾಗಿ 7 ವರ್ಷದ ಅವಧಿಗೆ ಮೀಸಲು ನಿಯೋಜನೆ ಮೇರೆಗೆ ಪಡೆದುಕೊಳ್ಳಲು ಸೇನೆ ಚಿಂತನೆ ನಡೆಸಿದೆ.