ನವದೆಹಲಿ, ಮೇ 14 (DaijiworldNews/PY) : ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ತೀವ್ರ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರು, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗಾಗಿ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದಾರೆ.
ಮಂಗಳವಾರ ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ನ ಮತ್ತಷ್ಟು ವಿವರಗಳನ್ನು ಪ್ರಕಟಿಸಿರುವ ನಿರ್ಮಲಾ ಸೀತಾರಾಮನ್ ಅವರು, ಈ ಪ್ಯಾಕೇಜ್ನಲ್ಲಿ ವಿಶೇಷ ಸವಲತ್ತುಗಳನ್ನು ಸಣ್ಣ ರೈತರು, ವಲಸೆ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಒದಗಿಸಲಾಗಿದೆ ಎಂದು ತಿಳಿಸಿದರು.
9 ಪ್ರಮುಖ ತೀರ್ಮಾನಗಳನ್ನು ಇಂದು ಘೋಷಣೆ ಮಾಡಲಾಗುವುದು. ಈ ಘೋಷಣೆಯಲ್ಲಿ ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ಗೃಹ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮೂರು ವಲಸೆ ಕಾರ್ಮಿಕರಿಗೆ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ದೇಶದ ರೈತ ಸಮುದಾಯಕ್ಕೆ ಕಳೆದ ಮೂರು ತಿಂಗಳಿನಿಂದ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಮುಖ್ಯವಾಗಿ ಕಳೆದ ಎರಡು ತಿಂಗಳಲ್ಲಿ 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು
ಈಗಾಗಲೇ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪುವಂತೆ ಮಾಡಲು ಕ್ರಮ ಕೈಗೊಂಡಿದ್ದು, ಅವರಿಗೆ ಈಗಾಗಲೇ ಎರಡು ತಿಂಗಳ ಉಚಿತ ಪಡಿತರ ನೀಡುವಂತೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ, 1 ಕೆಜಿ ಬೆಳೆಕಾಳುಗಳು ಸೇರಿದಂತೆ ಉಚಿತ ರೇಷನ್ ಕೊಡಲಾಗುತ್ತಿದ್ದು, 8 ಕೋಟಿ ವಲಸೆ ಕಾರ್ಮಿಕರಿಗೆ ಇದರಿಂದಾಗಿ ಅನುಕೂಲವಾಗಿದೆ ಎಂದರು.