ನವದೆಹಲಿ, ಮೇ 14 (DaijiworldNews/PY) : ಮಾರಣಾಂತಿಕ ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಂದು ವರ್ಷಗಳ ಕಾಲ ಶೇ.30ರಷ್ಟು ತಮ್ಮ ಸಂಬಳ ತ್ಯಜಿಸಲು ತೀರ್ಮಾನ ಮಾಡಿದ್ದಾರೆ.
ರಾಷ್ಟ್ರಪತಿಗಳು ರಾಜ್ಯ ಭವನದ ಖರ್ಚು-ವೆಚ್ಚಗಳನ್ನು ಕಡಲಿಮೆ ಮಾಡಲು ತೀರ್ಮಾನ ಮಾಡಿದ್ದು, ಅಲ್ಲದೇ, ತಮ್ಮ ದೇಶಿ ಪ್ರವಾಸ ಹಾಗೂ ಕಾರ್ಯಕ್ರಮಗಳನ್ನು ಕಡಿಮೆ ಮಾಡಿದ್ದಾರೆ ಎಂಬುದಾಗಿ ರಾಷ್ಟ್ರಪತಿ ಭವನ ತಿಳಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ಮಾರ್ಚ್ ತಿಂಗಳಲ್ಲೇ ಒಂದು ತಿಂಗಳ ಸಂಬಳವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ.
ಇದೀಗ ಮುಂದಿನ ವರ್ಷದ ಅವಧಿಯವರೆಗೂ ಶೇ.30ರಷ್ಟು ಸಂಬಳವನ್ನು ತ್ಯಜಿಸಲು ತೀರ್ಮಾನ ಮಾಡಿದ್ದಾರೆ. ಈ ಮೂಲಕ ಅವರು ಕೊರೊನಾ ವಿರುದ್ದದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲಿದ್ದಾರೆ.
ಅಲ್ಲದೇ, ವಿದ್ಯುಕ್ತ ಸಮಾರಂಭಗಳ ಸಂದರ್ಭ ಬಳಸಬೇಕಾದ ಅಧ್ಯಕ್ಷೀಯ ಲಿಮೋಸಿನ್ ಕಾರು ಖರೀದಿಯನ್ನು ಕೂಡಾ ಮುಂದೂಡಲು ತೀರ್ಮಾನಿಸಲಾಗಿದೆ. ಅಂತಹ ವೇಳೆಯಲ್ಲಿ ರಾಷ್ಟ್ರಪತಿ ಭವನ ಹಾಗೂ ಸರ್ಕಾರದ ಅಸ್ಥಿತ್ವದಲ್ಲಿರುವ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರಪತಿ ಭವನ ಹೇಳಿದೆ.