ಬೆಂಗಳೂರು, ಮೇ 14 (DaijiworldNews/SM): ಕೊರೊನಾದಿಂದಾಗಿ ದೇಶವೇ ಸಂಕಷ್ಟಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಿಸುವ ಸಮಯವಲ್ಲ. ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೊರೊನಾದಿಂದಾಗಿ ದೇಶ ಮಾತ್ರವಲ್ಲದೆ, ವಿಶ್ವವೇ ಸಂಕಷ್ಟಕ್ಕೀಡಾಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ಇಂತಹ ತಪ್ಪು ನಿರ್ಧಾರಗಳನ್ನು ಕೈಗೊಂಡಲ್ಲಿ ಪ್ರತಿಭಟನೆ, ಹೋರಾಟ ನಡೆಸಬೇಕಾದ ಅನಿವಾರ್ಯ ಎದುರಾಗಬಹುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಬಡವರ ಪರ ಎಂದು ಹೇಳುತ್ತಿದೆ. ಆದರೆ ಬಡವರ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಸರಕಾರ ಒಂದು ಹೇಳಿ ಮತ್ತೊಂದು ಮಾಡುತ್ತದೆ. ಬಿಜೆಪಿ ಸರಕಾರಕ್ಕೆ ಜನಪರವಾದ ಕಾಳಜಿಯೇ ಇಲ್ಲ. ಗ್ರಾಹಕರಿಗೆ ಬಂದಿರುವ ವಿದ್ಯುತ್ ಬಿಲ್ ಇದಕ್ಕೆ ಸಾಕ್ಷಿ ಎಂದು ದೂರಿದ್ದಾರೆ. ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಸರಕಾರ ವಿದ್ಯುತ್ ಬಿಲ್ ಏರಿಕೆ ಮಾಡಿ ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ. ಈ ಹಿನ್ನೆಲೆ ಸರಕಾರ ತನ್ನ ತಪ್ಪು ನಿರ್ಧಾರವನ್ನು ಕೈಬಿಟ್ಟಿ ತಿದ್ದಿಕೊಂಡು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದರು.