ಬೆಂಗಳೂರು, ಮೇ 15 (DaijiworldNews/SM): ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಸಮಾಸೇವಕ ಮುತ್ತಪ್ಪ ರೈ ವಿಧಿವಶರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಕ್ಯಾನ್ಸರ್ ವಿರುದ್ಧ ನಿರಂತರ ಹೋರಾಡಿದ್ದರು.
ತನ್ನ ಹಿಂದಿನ ಕರಾಳ ಜೀವನದ ಪಶ್ಚ್ಯಾತಾಪಪಟ್ಟು ಜಯಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿ ರಾಜ್ಯದೆಲ್ಲೆಡೆ ಸಮಾಜ ಸೇವೆಯ ಮನೋಭಾವವನ್ನು ಬಿತ್ತಿದ್ದರು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಅವರಿಗೆ ಕ್ಯಾನ್ಸರ್ ಮಹಾಮಾರಿ ದಾಳಿಯನ್ನಿಟ್ಟಿತ್ತು. ಅಲ್ಲಿಂದ ಮಹಾಮಾರಿಯ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು.
ಈ ನಡುವೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದ ಅವರು, ಬಡವರಿಗೆ ಕ್ಯಾನ್ಸರ್ ರೋಗವನ್ನು ದೇವರು ನೀಡಬಾರದು ಎಂದು ಪ್ರಾರ್ಥಿಸಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಪುತ್ತೂರಿನ ಕೆಯ್ಯೂರು ನಿವಾಸಿಯಾಗಿರುವ ಮುತ್ತಪ್ಪ ರೈಯವರು ರಾಜ್ಯದೆಲ್ಲೆಡೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜಯಕರ್ನಾಟಕ ಸಂಘಟನೆಯ ಮೂಲಕ ಕರುನಾಡಿನಲ್ಲಿ ಕನ್ನಡಿಗರಿಗೆ ನೆರವಾಗಿದ್ದರು. ಉದ್ಯಮಿಯಾಗಿರುವ ಮುತ್ತಪ್ಪ ರೈ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪುತ್ತೂರಿನಲ್ಲಿ ನಡೆಯುವ ಕಂಬಳದ ನೇತೃತ್ವ ವಹಿಸಿಕೊಳ್ಳುತ್ತಿದ್ದ ಅವರು ಆಸು ಪಾಸಿನ ಜನರ ಮನ ಗೆದ್ದಿದ್ದರು. ಕುಕ್ಕೆ ಕ್ಷೇತ್ರಕ್ಕೆ ಬ್ರಹ್ಮ ರಥ ನೀಡುವ ಮೂಲಕ ಕ್ಷೇತ್ರದ ಭಕ್ತರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು.