ಬೆಂಗಳೂರು, ಮೇ 15 (DaijiworldNews/PY) : ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಂಕಷ್ಟ ಇದ್ದರೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದತ್ತ ತಿರುಗಿ ನೋಡಿಲ್ಲ. ರಾಜ್ಯಕ್ಕೆ ಬರುವಂತಹ ಅನುದಾನ ಬಂದಿಲ್ಲ. ಕೇಂದ್ರ ಇತ್ತೀಚೆಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕದ ಹೆಸರಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದ್ದು, ತನ್ನ ನೌಕರರಿಗೆ ವೇತನ ಬಿಡುಗಡೆ ಮಾಡಿಲ್ಲ. ಯಾವುದೇ ಕಾರ್ಯಗಳಿಗೂ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕೊರೊನಾ ಪರಿಹಾರ ವಿತರಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಬೆಟ್ಟ ಅಗೆದು ಇಲಿ ಹಿಡಿಯುವ ಸ್ಥಿತಿ ಎದುರಾಗಿದೆ. ಜನರಿಗೆ ಬರಿ ಮಾಯಾಬಜಾರ್ ತೋರಿಸಿ ಯಮಾರಿಸುವಂತ ಕೆಲಸ ಆಗುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿ ಮಾಡಲು ಹೊರಟಿರುವುದು ಆರ್ಥಿಕತೆಯ ಮೇಲೆ ಹೊಡೆತವಾಗಲಿದೆ. ಸದನದಲ್ಲಿ ಚರ್ಚೆ ಮಾಡದೇ ಕಾಯ್ದೆಯನ್ನು ಜಾರಿಗೆ ತರುವುದು ಬೇಡ ಎಂದರು.
ಕೇಂದ್ರದ ಪರವಾಗಿ ಬಹುರಾಷ್ಟ್ರೀಯ ಕಂಪೆನಿಗಳು ನಿಂತಿದ್ದು, ರೈತರಿಗೆ ವಿರುದ್ದವಾದ ನೀತಿಗಳನ್ನು ಜಾರಿಗೆ ತರುತ್ತಿದೆ. ಕಾಂಗ್ರೆಸ್ ಇದರ ವಿರುದ್ದ ಹೋರಾಟ ಆರಂಭಿಸಲಿದೆ ಎಂದು ಹೇಳಿದರು.