ಬೆಂಗಳೂರು, ಮೇ 15 (DaijiworldNews/PY) : ಬೆಂಗಳೂರಿಗೆ ನವದೆಹಲಿಯಿಂದ ವಿಶೇಷ ರೈಲಿನ ಮೂಲಕ ಬಂದಿಳಿದ ಪ್ರಯಾಣಿಕರನ್ನು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 19 ಮಂದಿಯನ್ನು ವಾಪಾಸ್ ದೆಹಲಿಗೆ ಕಳುಹಿಸಲಾಗಿದೆ.
ನವದೆಹಲಿಯಿಂದ ಮಂಗಳವಾರ ರಾತ್ರಿ ಹೊರಟ ವಿಶೇಷ ರೈಲಿನಲ್ಲಿ ಸುಮಾರು 920 ಮಂದಿ ಪ್ರಯಾಣ ಆರಂಭಿಸಿದ್ದರು. ಅನಂತಪುರ, ಸಿಕಂದರಾಬಾದ್, ಭೋಪಾಲ್, ನಾಗ್ಪುರ ಹಾಗೂ ಗುಂತಕಲ್ನಲ್ಲಿ ರೈಲು ನಿಲುಗಡೆ ಇದ್ದ ಕಾರಣ ಹಲವರು ಅಲ್ಲಿ ಇಳಿದಿದ್ದು, 543 ಮಂದಿ ಮಾತ್ರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಗುರುವಾರ ಬೆಳಿಗ್ಗೆ ಬಂದಿಳಿದಿದ್ದರು.
ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಅಧಿಕಾರಿಗಳು ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲು ಸಿದ್ದತೆ ನಡೆಸಿದ್ದರು. ಪ್ರಯಾಣಿಕರಿಗೆ ತಂಗಲು 90 ಹೋಟೆಲ್ಗಳನ್ನು ಕಾಯ್ದಿರಿಸಿದ್ದರು. ಆರೋಗ್ಯ ತಪಾಸಣೆಗಾಗಿ ಬಿಬಿಎಂಪಿಯ 10 ತಂಡ ಆರೋಗ್ಯ ತಪಾಸಣೆ ನಡೆಸಲು ಸಿದ್ದವಾಗಿತ್ತು. ಪ್ರಯಾಣಿಕರನ್ನು ಹೊಟೇಲ್ಗಳಿಗೆ ತಲುಪಿಸಲು ಬಿಎಂಟಿಸಿ ಬಸ್ಗಳು ಕೂಡಾ ಸಜ್ಜಾಗಿ ನಿಂತಿದ್ದವು.
ಅಧಿಕಾರಿಗಳು ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ 100ಕ್ಕೂ ಅಧಿಕ ಮಂದಿ ಕ್ವಾರಂಟೈನ್ಗೆ ಒಳಪಡಲು ನಿರಾಕರಿಸಿದರು. ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕು ಎನ್ನುವ ಮಾಹಿತಿ ಇಲ್ಲದೇ ಇದ್ದ ಕಾರಣ ಬೆಂಗಳೂರಿಗೆ ಬಂದಿದ್ದೇವೆ. ಈ ಬಗ್ಗೆ ಮೊದಲೇ ಮಾಹಿತಿ ತಿಳಿಸಿದ್ದರೆ ನಾವು ಬರುತ್ತಿರಲಿಲ್ಲ ಎಂದಿದ್ದಾರೆ.
ಕಷ್ಟದ ಕಾರಣದಿಂದಾಗಿ ಹುಟ್ಟೂರಿಗೆ ಬಂದಿದ್ದೇವೆ. ಆದರೆ, ಈಗ ಹಣ ಕೊಟ್ಟು ಕ್ವಾರಂಟೈನ್ನಲ್ಲಿ ಇರಬೇಕು ಎಂದರೆ ಏನು ಮಾಡುವುದು ಎಂದು ಕಣ್ಣೀರು ಹಾಕಿದ್ದಾರೆ.
ಗರ್ಭಿಣಿ ಸೊಸೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳನ್ನು ನೋಡಿಕೊಂಡು ಹೋಗಲು ಬಂದಿದ್ದೇನೆ. ಮೊದಲೇ ಕ್ವಾರಂಟೈನ್ ಬಗ್ಗೆ ಮಾಹಿತಿ ನೀಡುತ್ತಿದ್ದರೆ ಬರುತ್ತಿರಲಿಲ್ಲ ಎಂದು ಕಾರ್ತಿಕ್ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ಗೆ ಯಾವುದೇ ಕಾರಣಕ್ಕೂ ಒಳಪಡುವುದಿಲ್ಲ ಎಂದು ಹಲವರು ಪಟ್ಟು ಹಿಡಿದಿದ್ದರು. ಅವರನ್ನು ಮನವೊಲಿಸಲು ಅಧಿಕಾರಿಗಳಿ ಹರಸಾಹಸಪಟ್ಟಿದ್ದಾರೆ. ನಂತರ ಬಹುತೇಕ ಮಂದಿ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.