ನವದೆಹಲಿ, ಮೇ 15 (DaijiworldNews/PY) : ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಕ್ರೊಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಪ್ರಧಾನಿ ಮೋದಿ ಅವರು, ಕೊರೊನಾ ವೈರಸ್ ವಿರುದ್ದದ ಹೋರಾಟವನ್ನು ಬಲಪಡಿಸುವ ಸಲುವಾಗಿ ವಿಶ್ವಾದ್ಯಂತ ಆರೋಗ್ಯ ಸೇತು ಆ್ಯಪ್ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಸ್ತಾಪಿಸಿದ್ದಾರೆ.
ಭಾರತದ ಸಾಮರ್ಥ್ಯ ಹಾಗೂ ಜಗತ್ತಿಗೆ ಅದನ್ನು ಪ್ರಯೋಜನಕ್ಕಾಗಿ ಹೇಗೆ ಉತ್ತಮವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಎನ್ನುವ ಬಗ್ಗೆ ಪ್ರಧಾನಿ ಮೋದಿ ಅವರು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.
ಆರೋಗ್ಯ ಸೇತು ಆ್ಯಪ್, ಸೋಂಕಿತರನ್ನು ಪತ್ತೆ ಮಾಡುವ ಸಲುವಾಗಿ ಭಾರತ ಅಭಿವೃದ್ದಿಪಡಿಸಿದಂತಹ ಪರಿಣಾಮಕಾರಿಯಾದ ಆ್ಯಪ್ ಆಗಿದೆ. ಲಸಿಕೆ ಉತ್ಪಾದನೆ ಹಾಗೂ ಚಿಕಿತ್ಸಾ ಉಪಕರಣಗಳನ್ನು ಹೆಚ್ಚಿಸುವುದರ ಮುಖಾಂತರ ಭಾರತದ ಔಷಧೀಯ ಸಾಮರ್ಥ್ಯವನ್ನು ಕೂಡಾ ದೊಡ್ಡಮಟ್ಟದಲ್ಲಿ ಹೆಚ್ಚಿಸುವ ಬಗ್ಗೆ ಉಭಯರು ಚರ್ಚೆ ಮಾಡಿದ್ದಾರೆ ಎಂದು ಪ್ರಧಾನಿ ಕಾರ್ಯಲಯದ ಪ್ರಕಟಣೆ ತಿಳಿಸಿದೆ.
ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಜಾಗತಿಕವಾದ ಪ್ರಯತ್ನಕ್ಕಾಗಿ ಭಾರತದ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವುದು, ಇದರಲ್ಲಿ ವಿಶೇಷವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ನೆರವಾಗುವ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಲ್ಗೇಟ್ಸ್ ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಕೊರೊನೋತ್ತರ ಜಗತ್ತಿ ಜೀವನದ ವಿಧಾನ, ಆರ್ಥಿಕ ಸಂಘಟನೆ, ಸಾಮಾಜಿಕ ಜೀವನ, ಶಿಕ್ಷಣ ಸೇವೆ ಹಾಗೂ ಆರೋಗ್ಯದಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ವಿಶ್ಲೇಷಣೆಯ ನೇತೃತ್ವವನ್ನು ಗೇಟ್ಸ್ ಫೌಂಡೇಶನ್ ವಹಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರು ಗೇಟ್ಸ್ ಅವರಿಗೆ ಸಲಹೆ ನೀಡಿದರು.
ಬಿಲ್ ಗೇಟ್ಸ್ ಅವರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯನಿರ್ವಹಿಸುವ ಮಿಲಿಂದಾ ಗೇಟ್ಸ್ ಫೌಂಡೇಶನ್ನ ಅಧ್ಯಕ್ಷರೂ ಆಗಿದ್ದಾರೆ.