ಹುಬ್ಬಳ್ಳಿ, ಮೇ 15 (DaijiworldNews/PY) : ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸತ್ತಿರುವ ಲಕ್ಷಾಂತರ ಶಿಕ್ಷಕರು ಹಾಗೂ ಶಿಕ್ಷಕೇತರಿಗೆ ಏಕೆ ನೆರವು ನೀಡಲಿಲ್ಲ. ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅವರು ಅಭದ್ರತೆಯಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ ಉಳಿದ ವರ್ಗಗಳಿಗೆ ನೀಡುತ್ತಿರುವ ಆರ್ಥಿಕ ಪ್ಯಾಕೇಜ್ ರೀತಿ ಇವರಿಗೂ ವಿಶೇಷ ಆರ್ಥಿಕ ನೆರವು ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸಿಎಂ ಬಿಎಸ್ವೈ ಅವರಿಗೆ ಪತ್ರ ಬರೆದಿರುವ ಅವರು, ಪ್ರಸ್ತುತ ರಾಜ್ಯ ಹಾಗೂ ದೇಶ ಮಹಾಮಾರಿ ಕೊರೊನಾ ಸಂಕಷ್ಟಕ್ಕೆ ಒಳಗಾಗಿ ಕಷ್ಟ ಎದುರಿಸುತ್ತಿದೆ. ಇಂತಹ ಸಂದಿಗ್ಥ ಸಂದರ್ಭದಲ್ಲಿ ಸಣ್ಣ ವ್ಯಾಪಾರಸ್ಥರಿಗೆ, ಕಾರ್ಮಿಕರಿಗೆ, ದಿನಗೂಲಿ ಕೆಲಸಗಾರರಿಗೆ, ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ, ಸಮಾಜದಲ್ಲಿ ದುಡಿದು ತಿನ್ನುತ್ತಿರುವವರಿಗೆ, ಇತರೆ ಅನೇಕ ರೀತಿಯ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವ ಎಲ್ಲಾ ವರ್ಗದ ಜನರಿಗೆ ಎಲ್ಲಾರೀತಿಯಾದ ಸೌಲಭ್ಯ ನೀಡಿದ್ದೀರಿ. ಆದರೆ, ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಂತರ ಶಿಕ್ಷಕರು ಹಾಗೂ ಶಿಕ್ಷಕೇತರಿಗೆ ಯಾಕೆ ವಿಶೇಷ ನೆರವು ನೀಡಿಲಿಲ್ಲ. ಅವರು ಕೂಡಾ ಮನುಷ್ಯರಲ್ಲವೇ. ಲಾಕ್ಡೌನ್ ಕಾರಣದಿಂದಾಗಿ ರಾಜ್ಯದಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಈ ಕಾರಣದಿಂದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವೇತನವಿಲ್ಲದೇ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಅವರಿಗೆ ಎದುರಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ಬಂದು ನಿಂತಿವೆ. ಇಂತಹ ಪರಿಸ್ಥಿತಿ ಮುಂದುವರೆದರೆ ಆ ಪೈಕಿ ಎಷ್ಟೋ ಮಂದಿ ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ. ಅದಲ್ಲದೇ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ರೀತಿಯಾದ ಸೌಲಭ್ಯಗಳಿಲ್ಲದೇ ನೌಕರರು ಅತಂತ್ರರಾಗಿದ್ದಾರೆ. ಸಾಲ ಮಾಡಿ ಜೀವನ ನಿರ್ವಹಣೆ ಮಾಡಬೇಕು ಎಂದರೆ ಅವರಿಗೆ ಸಾಲ ನೀಡುವವರು ಇಲ್ಲ. ಹಾಗಾಗಿ ಅವರ ಜೀವನ ನರಕಯಾತನೆಯಾಗಿದೆ. ಎಲ್ಲಾ ಹಂತದವರಿಗೂ ಸರ್ಕಾರ ವಿಶೇಷ ಪ್ಯಾಕೇಜ್ ನೀಡುತ್ತಿರುವುದು ಸರಿ. ಆದರೆ, ಅದೇ ರೀತಿಯಾಗಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ ಜೀವನ ನಿರ್ವಹಣೆಗೆ ಕೂಡಲೇ ಸ್ಪಂದಿಸಬೇಕು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಉಳಿದ ವರ್ಗಗಳಿಗೆ ನೀಡುತ್ತಿರುವ ಆರ್ಥಿಕ ವಿಶೇಷ ಪ್ಯಾಕೇಜ್ ರೀತಿ ಶಿಕ್ಷಕರಿಗೂ ನೀಡಿ, ಶಿಕ್ಷಕರ ಕುಟುಂಬಗಳನ್ನು ಕಾಪಾಡಿ ಎಂದು ಹೇಳಿದ್ದಾರೆ.