ಬೆಂಗಳೂರು, ಮೇ 15 (Daijiworld News/MSP): ಕೊರೊನಾ ಕಾರಣದಿಂದ ಮುಂದೂಡಿಕೆಯಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಪರೀಕ್ಷಾ ವೇಳಾಪಟ್ಟಿ ನಿಗದಿ ಪಡಿಸುವ ಸಂಬಂಧ ನಾಳೆ ಮಹತ್ವದ ಸಭೆ ನಡೆಯಲಿರುವ ಸಾಧ್ಯತೆ ಇದೆ. ಬಹುತೇಕ ಕಡೆ ಪರೀಕ್ಷೆಗಾಗಿ ಪೂರ್ವ ಸಿದ್ಧತೆಗಳನ್ನು ಪೂರ್ಣ ಗೊಳಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಮೌಖಿಕವಾಗಿ ಹಲವಾರು ಬಾರಿ ಸೂಚನೆ ನೀಡಿದ್ದರು.
ಇದಲ್ಲದೆ ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಸುರೇಶ್ಕುಮಾರ್, ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ಕೊಟ್ಟಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಅವರು ನಾಳೆ ಮತ್ತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ವೇಳಾಪಟ್ಟಿ ನಿಗದಿಪಡಿಸುವ ಸಂಭವವಿದೆ.
ಈ ಬಾರಿ ಊರಿಗೆ ತೆರಳಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಾರು ಎಲ್ಲಿ ಪರೀಕ್ಷೆ ಬರೆಯಲು ಇಚ್ಚಿಸುತ್ತಾರೋ ಅಂತಹ ಸಮೀಪದ ಕೇಂದ್ರಗಳಲ್ಲೇ ಅವಕಾಶ ನೀಡುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಕೊಠಡಿಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ, ಥರ್ಮಲ್ ಪರೀಕ್ಷೆ ಸೇರಿದಂತೆ ಕೊರೊನಾ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ