ನವದೆಹಲಿ, ಮೇ 15 (DaijiworldNews/PY) : ಉತ್ತರ ಸಿಕ್ಕಿಂನ ಲುಗ್ನಕ್ ಲಾ ಪರ್ವತ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಹಿಮಪಾತದಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹಾಗೂ ಓರ್ವ ಯೋಧ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಸಿಬ್ಬಂದಿ 18 ಸದಸ್ಯರ ಗುಂಪಿನ ಭಾಗವಾಗಿದ್ದು, ಆ ಗುಂಪನ್ನು ಹಿಮಪಾತ ಸಂಭವಿಸುವ ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಉತ್ತರ ಸಿಕ್ಕಿಂನಲ್ಲಿ ಮೇ 14ರಂದು ಪೆಟ್ರೋಲಿಂಗ್-ಕಮ್-ಸ್ನೋ ಕ್ಲಿಯರೆನ್ಸ್ ಕೆಲಸಕ್ಕೆ ನಿಯೋಜನೆ ಮಾಡಲಾಗಿದ್ದ ಗುಂಪು ಹಿಮಪಾತಕ್ಕೆ ಸಿಲುಕಿತ್ತು ಎಂಬುದಾಗಿ ಸೇನೆಯ ಹಿರಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿ.ಎ ಹಾಗೂ ಸೈನಿಕ ಸಪಾಲಾ ಷಣ್ಮುಖ ರಾವ್ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.