ಬೆಂಗಳೂರು, ಮೇ 15 (Daijiworld News/MSP): ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ದಿಂದ ಮೇ 15 ಬೆಳಿಗ್ಗೆ 9.00 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಲ್ಕನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 107 ಮಂದಿ ಅನಿವಾಸಿ ಭಾರತೀಯರು ಪ್ರಯಾಣಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಬಂದಿಳಿದ ಒಟ್ಟು 107 ಮಂದಿ ಪ್ರಯಾಣಿಕರಲ್ಲಿ 59 ಪುರುಷ ಮತ್ತು 48 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಒಬ್ಬರು ಗರ್ಭಿಣಿ ಮಹಿಳೆ ಹಾಗೂ 10 ವರ್ಷದೊಳಗಿನ ಒಂದು ಮಗು ಇದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ, ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ನಡೆಸಿದ 107 ಪ್ರಯಾಣಿಕರ ಆರೋಗ್ಯ ತಪಾಸಣೆ ವೇಳೆ, ಒಬ್ಬ ಪುರುಷ ಪ್ರಯಾಣಿಕನಲ್ಲಿ ಕೊರೋನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆ ಆ ವ್ಯಕ್ತಿಯನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿನ ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
106 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಬಿಎಂಟಿಸಿ ಬಸ್ ಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.