ಬೆಂಗಳೂರು, ಮೇ 15 (Daijiworld News/MSP): ನಾನು ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ರೈತರ ಹಿತಕ್ಕೆ ಮಾರಕವಾಗುವುದಾದರೆ ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎಂದು ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ಎದ್ದಿರುವ ವಿವಾದ ಕುರಿತು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸಮರ್ಥನೆ ನೀಡಿದ್ದಾರೆ.
ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ 'ರೈತರು ಮೊದಲು' ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ. ಇದರಿಂದ ರಾಜ್ಯದ ರೈತರಿಗೆ ಯಾವುದೆ ತೊಂದರೆ ಇಲ್ಲ, ಅಲ್ಲದೆ ಎಪಿಎಂಸಿಗಳ ಅಸ್ತಿತ್ವಕ್ಕೂ ತೊಂದರೆ ಇಲ್ಲ ಅವು ಈ ಹಿಂದೆ ಇದ್ದಂತೆ ಮುಂದುವರಿಯಲಿದೆ ಎಂದು ಹೇಳಿದರು.
ಈಗಲೂ ಎಪಿಎಂಸಿ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿಲ್ಲ. ಅದರಲ್ಲಿದ್ದ ಕಾಯ್ದೆಯ ಎರಡು ಸೆಕ್ಷನ್ ಗಳಿಗೆ ಮಾತ್ರ ತಿದ್ದುಪಡಿ ಮಾಡಿದ್ದೇವೆ . ಈ ತಿದ್ದುಪಡಿಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಅಂಗಣಕ್ಕಷ್ಟೇ ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿ ಆ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಒದಗಿಸಿ ರೈತರ ಹಿತ ಕಾಯಲು ಅವಕಾಶ ನೀಡುತ್ತದೆ ಎಂದು ಸ್ಪಷ್ಟನೆ ನೀಡಿದರು.
ಈ ಕಾಯ್ದೆಯಿಂದ ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಪಡೆಯುತ್ತಾರೆ. ಹೀಗಾಗಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವಲ್ಲಿ ಅವಕಾಶ ನೀಡಿದಂತಾಗುತ್ತದೆಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.