ನವದೆಹಲಿ, ಮೇ 15 (DaijiworldNews/PY) : ದೇಶದ ಬಡವರು ಮತ್ತು ವಲಸಿಗರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸಲುವಾಗಿ ಸರ್ಕಾರ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಕೈಜೋಡಿಸಲು ವಿಶ್ವ ಬ್ಯಾಂಕ್ ಒಪ್ಪಿಗೆ ನೀಡಿದ್ದು, 1 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹7,500 ಕೋಟಿ) ನೆರವನ್ನು ಘೋಷಣೆ ಮಾಡಿದೆ.
ವಿಶ್ವ ಬ್ಯಾಂಕ್ ಕಳೆದ ತಿಂಗಳು ಕೊರೊನಾ ಬಿಕ್ಕಟ್ಟಿಗೆ ಸಿಲುಕಿದ ದೇಶದ ಆರೋಗ್ಯ ವಲಯಕ್ಕೆ 1 ಬಿಲಿಯನ್ ಅಮೆರಿಕನ್ ಡಾಲರ್ ತುರ್ತು ನೆರವು ಘೋಷಣೆ ಮಾಡಿತ್ತು. ಈ ಘೋಷಣೆಯ ಮೂಲಕ ವಿಶ್ವ ಬ್ಯಾಂಕ್ನಿಂದ ದೇಶಕ್ಕೆ ಒಟ್ಟು ಎರಡು ಬಿಲಿಯನ್ ಡಾಲರ್ ನೆರವು ಸಿಕ್ಕಂತಾಗಿದೆ.
ಭಾರತದೊಂದಿಗೆ ವಿಶ್ವ ಬ್ಯಾಂಕ್ ಮೂರು ವಲಯಗಳಲ್ಲಿ ಕೈಜೋಡಿಸಲಿದ ಎಂದು ವಿಶ್ವ ಬ್ಯಾಂಕ್ ನಿರ್ದೇಶಕರಾಗಿರುವ ಜುನೈದ್ ಅಹಮದ್ ಭಾರತಕ್ಕೆ ತಿಳಿಸಿದ್ದಾರೆ.
ವಿಶ್ವ ಬ್ಯಾಂಕ್ ನಿಧಿಯು, ಅಸಂಘಟಿತ ಕಾರ್ಮಿಕರಿಗೆ, ಭಾರತ ಸರ್ಕಾರ ವಲಸಿಗರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ತಂತ್ರಜ್ಞಾನ ವ್ಯವಸ್ಥೆಗೆ ಉಪಯೋಗವಾಗಲಿದೆ.
ವಿಶ್ವ ಬ್ಯಾಂಕ್, ಭಾರತದ ಸುಮಾರು 400ಕ್ಕೂ ಹೆಚ್ಚು ಸಾಮಾಜಿಕ ಭದ್ರತೆಗೆ ಸಂಬಂಧಿತ ಯೋಜನೆಗಳನ್ನು ತಂತ್ರಜ್ಞಾನ ಆಧಾರಿತ ಸಂಯೋಜನೆಗೊಳಿಸುವ ಕಾರ್ಯಗಳತ್ತ ಗಮನ ನೀಡಿದೆ. ಗ್ರಾಮೀಣ ಭಾಗದ ಬಡವರು ಹಾಗೂ ನಗರದ ಬಡವರಿಗೆ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಸಮಾನತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನ ವ್ಯವಸ್ಥೆ ಅವಶ್ಯಕವಾಗಿದೆ ಎಂದು ಜುನೈದ್ ಅಹಮದ್ ತಿಳಿಸಿದ್ದಾರೆ.
ಸಾಮಾಜಿಕ ಯೋಜನೆಗಳಿಗಾಗಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುವುದನ್ನು ತಪ್ಪಿಸುವುದು, ಜನರು ಇರುವಲ್ಲಿಯೇ ಯೋಜನೆ ಬಳಕೆಗೆ ಅವಕಾಶ ಕಲ್ಪಿಸುವುದನ್ನು ಸಾಧಿಸುವ ಸಲುವಾಗಿ ತಂತ್ರಜ್ಞಾನ ವ್ಯವಸ್ಥೆತಯನ್ನು ರೂಪಿಸುವ ಯೋಜನೆ ಪ್ರಮುಖವಾಗಿದೆ.
ವಿಶ್ವ ಬ್ಯಾಂಕ್ ಕಳೆದ ತಿಂಗಳು ಕೊರೊನಾ ಸೋಂಕಿನಿಂದಾಗಿ ಸಂಕಷ್ಟಕ್ಕೊಳಗಾಗಿರುವ ರಾಷ್ಟ್ರಗಳಿಗೆ 160 ಬಿಲಿಯನ್ ಡಾಲರ್ ತುರ್ತು ಸಹಕಾರ ನೀಡಲು ಸಮ್ಮತಿಸಿದೆ.
1 ಬಿಲಿಯನ್ ಡಾಲರ್ ಪೈಕಿ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ (ಐಡಿಎ)ನಿಂದ 550 ಮಿಲಿಯನ್ ಡಾಲರ್ ಸಿಗಲಿದೆ. 200 ಮಿಲಿಯನ್ ಡಾಲರ್ ಐಬಿಆರ್ಡಿ ಕಡೆಯಿಂದ ಸಾಲದ ರೂಪದಲ್ಲಿ ಹಾಗೂ 2020ರ ಜೂನ್ 30ಕ್ಕೆ ಉಳಿದ 250 ಮಿಲಿಯನ್ ಡಾಲರ್ ನೆರವು ಪೂರೈಕೆಯಾಗಲಿದೆ.