ನವದೆಹಲಿ , ಮೇ 15 (Daijiworld News/MSP): ಕೋವಿಡ್ ಲಾಕ್ ಡೌನ್ ಪರಿಸ್ಥಿತಿಯಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಶಮನಗೊಳಿಸಿ ಆರ್ಥಿಕತೆಗೆ ಬಲ ತುಂಬಲು ಹಾಗೂ ಸಂಕಷ್ಟದಲ್ಲಿರುವ ದೇಶವಾಸಿಗಳ ಸಹಾಯಕ್ಕಾಗಿ ಕೇಂದ್ರ ಸರಕಾರವು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ‘ಆತ್ಮ ನಿರ್ಭರ ಭಾರತ’ ವಿಶೇಷ ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ನೀಡಿದ್ದಾರೆ.
ಮೂರನೇ ಹಂತದ ಪ್ಯಾಕೇಜ್ ನಲ್ಲಿ 11 ಉಪಕ್ರಮಗಳನ್ನು ಘೋಷಿಸಲಾಗಿದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಮೀಸಲಿಟ್ಟು್ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಲ ಹಾಗೂ ಕೃಷಿ ಸಂಬಂಧಿತ ಸ್ಟಾರ್ಟ್ ಅಪ್ಗಳಿಗೂ ಸಾಲ ಸೌಲಭ್ಯ ಒದಗಿಸಲಾಗುವುದು. ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ಸೇರಿದಂತೆ ಆಹಾರ ಘಟಕಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಸ್ಥಳೀಯ ಹಾಗೂ ಕಿರು ಆಹಾರ ಉದ್ಯಮದ ಉನ್ನತಿಗಾಗಿ 10000 ಕೋಟಿ ರೂ. ವಿಶೇಷ ಯೋಜನೆಯನ್ನು ಪರಿಚಯಿಸಲಾಗುವುದು. ಸ್ಥಳೀಯ ವಸ್ತುಗಳನ್ನು ಜಾಗತಿಕ ಬ್ರ್ಯಾಂಡ್ ಮಾಡುವ ಪ್ರಧಾನಿ ಮೋದಿ ಆಶಯವನ್ನು ಈ ಮೂಲಕ ನೆರವೇರಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕವನ್ನು ರಾಗಿ ಕ್ಲಸ್ಟರ್, ಬಿಹಾರವನ್ನು ಬೆಣ್ಣೆ ಕ್ಲಸ್ಟರ್, ಕಾಶ್ಮೀರನ್ನು ಕೇಸರಿ ಕ್ಲಸ್ಟರ್, ಆಂಧ್ರವನ್ನು ಮೆಣಸಿನ ಕ್ಲಸ್ಟರ್, ಹೀಗೆ ನಮ್ಮ ವಿವಿಧ ರಾಜ್ಯಗಳಲ್ಲಿ ಹೆಸರುವಾಸಿಯಾಗಿರುವ ಉತ್ಪನ್ನಗಳ ಬ್ರ್ಯಾಂಡ್ ಸೃಷ್ಟಿಸಲಾಗುವುದು.
ಲಾಕ್ಡೌನ್ ಸಮಯದಲ್ಲಿ ಹಾಲಿನ ಬೇಡಿಕೆ ಶೇ. 20 ರಿಂದ 25ಕ್ಕೆ ಕುಸಿದಿದೆ. ಹೀಗಾಗಿ ಅದರ ಉತ್ತೇಜನಕ್ಕಾಗಿ 2020-21ರವರೆಗೆ ಡೈರಿ ಸಹಕಾರಿ ಸಂಸ್ಥೆಗಳಿಗೆ ವಾರ್ಷಿಕ ಶೇ. 2 ರಷ್ಟು ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ನೀಡುವ ಹೊಸ ಯೋಜನೆ ಜಾರಿಗೆ ತರಲಾಗುವುದು. ಇದಕ್ಕಾಗಿ ಹೆಚ್ಚುವರಿ 5000 ಕೋಟಿ ರೂ. ಅನ್ನು ಮೀಸಲಿಡಲಾಗಿದ್ದು, 2 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಕಳೆದ ಬಜೆಟ್ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಇದರಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಲಾಗುತ್ತದೆ. ಈ ಮೂಲಕ 65 ಲಕ್ಷ ಜನರಿಗೆ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೀನುಗಾರರಿಗೆ ಹೊಸ ದೋಣಿಗಳನ್ನು ಒದಗಿಸುವುದು, ಮೀನುಗಾರಿಕಾ ಬಂದರುಗಳನ್ನು ನಿರ್ಮಿಸುವುದು, ದೋಣಿಗಳಿಗೆ ಮತ್ತು ಮೀನುಗಾರರಿಗೆ ವಿಮಾ ಸೌಲಭ್ಯ ಇತ್ಯಾದಿ ಸೌಲಭ್ಯಗಳನ್ನು ಈ ಯೋಜನೆಯಡಿಯಲ್ಲಿ ಒದಗಿಸಲಾಗುವುದು ಎಂದರು