ನವದೆಹಲಿ, ಮೇ 16 (DaijiworldNews/PY) : ಸೋಮವಾರ ಆರಂಭವಾಗಲಿರುವ ಲಾಕ್ಡೌನ್ನ ನಾಲ್ಕನೇ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಡಿಲಿಕೆ ಇರಲಿದ್ದು, ರಾಜ್ಯ ಸರ್ಕಾರಗಳಿಗೆ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ನಿಗದಿ ಮಾಡುವ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ಡೌನ್ ಅನ್ನು ಸಡಿಲಿಕೆ ಮಾಡಬಹುದು ಎಂಬ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಸಲಹೆಯನ್ನು ಆಧರಿಸಿ, ಲಾಕ್ಡೌನ್ 4ರ ಕ್ರಮಾವಳಿಗಳನ್ನು ರೂಪಿಸಲಾಗುತ್ತದೆ. ರಾಜ್ಯಗಳ ಬೇಡಿಕೆಗೆ ಮನ್ನಣೆ ಸಿಗುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಶುಕ್ರವಾರ ಸಂಜೆ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ಡೌನ್ ಸಡಿಲಿಕೆಯ ಬಗ್ಗೆ ತಮ್ಮ ಸಲಹೆಗಳಲ್ಲಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ಬಹುತೇಕ ರಾಜ್ಯಗಳು ತಮ್ಮ ಸಲಹೆ ನೀಡಿದ್ದವು. ಶುಕ್ರವಾರ ಆರೋಗ್ಯ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಲಾಕ್ಡೌನ್ ವಿಚಾರದ ಬಗ್ಗೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂಬುದರ ವಿಚಾರವಾಗಿ ಸಚಿವರ ಗುಂಪು ಸಭೆ ನಡೆಸಿದೆ.
ಲಾಕ್ಡೌನ್ ಅನ್ನು ಮೇ 18ರ ಬಳಿಕ ಎಷ್ಟರ ಮಟ್ಟಿಗೆ ಸಡಿಲಿಕೆ ಮಾಡಲಾಗುತ್ತದೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಆದರೆ, ಈಗಾಗಲೇ ಮಾರುಕಟ್ಟೆಗಳಿಗೆ ಕಾರ್ಯನಿರ್ವಹಿಸಲು ಹಲವು ರಾಜ್ಯಗಳು ಅವಕಾಶ ನೀಡಿದ್ದು, ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ಬಸ್ ಸೇವೆಯೂ ಆರಂಭವಾಗಿದೆ. ಕೆಲ ರಾಜ್ಯಗಳು ಹಲವು ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿವೆ.
ಸೋಮವಾರದ ನಂತರ, ಆಟೊ ರಿಕ್ಷಾ ಓಡಾಟಕ್ಕೆ ಕೆಂಪು ವಲಯಗಳಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಆದರೆ, ಪ್ರಯಾಣಿಕರ ಸಂಖ್ಯೆಯ ಮೇಲೆ ನಿರ್ಬಂಧವಿರಬಹುದು. ಸಂಸ್ಥೆಗಳು ಅಗತ್ಯವಲ್ಲದ ವಸ್ತುಗಳನ್ನು ಪೂರೈಸಲು ಕೆಂಪು ವಲಯಗಳಲ್ಲಿ ಕೂಡ ಇ–ಕಾಮರ್ಸ್ ಅವಕಾಶ ದೊರೆಯಬಹುದು. ಆದರೆ, ಈ ಸೌಲಭ್ಯ ಕಂಟೈನ್ಮೆಂಟ್ ವಲಯಗಳಲ್ಲಿ ದೊರೆಯುವುದಿಲ್ಲ.
ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ಕೊರೊನಾ ಸೋಕು ಪೀಡಿತ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳಾಗಿ ವರ್ಗೀಕರಿಸುವ ಅಧಿಕಾರ ತಮಗೆ ನೀಡಬೇಕು ಎಂದು ಕೋರಿವೆ. ಸುರಕ್ಷಿತವಾದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ಹಲವು ರಾಜ್ಯಗಳು ಕೇಳಿವೆ.
ರೈಲು ಹಾಗೂ ವಿಮಾನ ಸೇವೆಯನ್ನು ಮೇ ಅಂತ್ಯದವರೆಗೆ ಪೂರ್ಣಪ್ರಮಾಣದಲ್ಲಿ ಪ್ರಾರಂಭ ಮಾಡಬಾರದು ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಬಹುತೇಕ ಎಲ್ಲಾ ರಾಜ್ಯಗಳು, ಪ್ರಯಾಣಿಕರ ರೈಲುಗಳ ಸಂಚಾರವನ್ನು ಪ್ರಾರಂಭ ಮಾಡಬಾರದು ಎಂದು ಹೇಳಿವೆ. ಇದನ್ನು ಜಾರ್ಖಂಡ್, ಒಡಿಶಾ ಹಾಗೂ ಛತ್ತೀಸ್ಗಡ ಸರ್ಕಾರಗಳು ಬಲವಾಗಿ ಪ್ರತಿಪಾದಿಸಿವೆ.
ಕೆಲವು ರಾಜ್ಯಗಳು ದೇಶೀಯ ವಿಮಾನ ಸಂಚಾರಕ್ಕೆ ಒಲವು ವ್ಯಕ್ತಪಡಿಸಿವೆ. ಆದರೆ, ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಪ್ರಾರಂಭ ಮಾಡಬಾರದು ಎಂದು ಎಲ್ಲಾ ರಾಜ್ಯಗಳು ತಿಳಿಸಿವೆ.
ಇನ್ನು ಯುಪಿ ಸರ್ಕಾರವು, ಸೆಲೂನ್, ರೆಸ್ಟೊರೆಂಟ್, ಹೊಟೇಲ್ ಹಾಗೂ ಕೈಗಾರಿಕೆಗಳನ್ನು ಆರಂಭಿಸಬೇಕು. ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದಿದೆ.
ಟ್ಯಾಕ್ಸಿ ಹಾಗೂ ಕ್ಯಾಬ್ ಸೇವೆಯನ್ನು ಆರಂಭ ಮಾಡಬೇಕು ಎಂದು ರಾಜಸ್ಥಾನ ಸರ್ಕಾರ ಕೋರಿದೆ. ರಸ್ತೆ ಸಾರಿಗೆ ಹಾಗೂ ಪಾಸ್ ಆಧಾರದ ಮೇಲೆ ಅಂತರ್ರಾಜ್ಯ ವಾಹನಗಳ ಸಂಚಾರವನ್ನು ಆರಂಭ ಮಾಡಬೇಕು ಎಂದು ಕೇರಳ ಸರ್ಕಾರ ತಿಳಿಸಿದ್ದು, ಪಶ್ಚಿಮ ಬಂಗಾಳ ಸರ್ಕಾರ ಇದೇ ಮಾತನ್ನು ಹೇಳಿದೆ.
ಮೇ 17ರ ಬಳಿಕವೂ ಕಠಿಣ ಲಾಕ್ಡೌನ್ ಮುಂದುವರಿಸಿ ಎಂದು ಬಿಹಾ ಸರ್ಕಾರ ತಿಳಿಸಿದೆ. ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಿ, ಆದರೆ ನಮ್ಮಲ್ಲಿ ಬಸ್, ಮೆಟ್ರೋ ಸೇವೆಯನ್ನು ಪ್ರಾರಂಭ ಮಾಡುವುದಿಲ್ಲ. ಖಾಸಗಿ ಬಸ್ ಓಡಾಟಕ್ಕೆ ನಿರ್ಬಂಧದ ಆಧಾರದ ಮೇಲೆ ಅವಕಾಶ ಕಲ್ಪಿಸಬಹುದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.