ಬೆಂಗಳೂರು, ಮೇ 16 (DaijiworldNews/PY) : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದ ಸಿದ್ದತೆ ಆರಂಭವಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಕಾರ್ಯಕ್ಕೆ ತೀರ್ಮಾನಿಸಿದ್ದು, ಆಯಾ ಜಿಲ್ಲೆ ಹಾಗೂ ತಾಲೂಕು ಅಥವಾ ಅಂತರ್ ಜಿಲ್ಲಾ ವ್ಯವಸ್ಥೆಯ ಮೂಲಕ ಇಂಗ್ಲೀಷ್ ಭಾಷೆಯನ್ನು ಹೊರತುಪಡಿಸಿ, ಉಳಿದ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಶೀಘ್ರದಲ್ಲೇ ಇಲಾಖೆ ಆರಂಭ ಮಾಡಲಿದೆ ಎಂದು ಉನ್ನತ ಮೂಲ ಖಚಿತಪಡಿಸಿದೆ.
ಜಿಲ್ಲಾಮಟ್ಟದಲ್ಲಿ ಮೌಲ್ಯಮಾಪನ ಕೇಂದ್ರದ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ. ಕಾಲೇಜುಗಳಿಗೆ ಹಾಗೂ ಮೌಲ್ಯಮಾಪಕರಿಗೆ ಸರ್ಕಾರದ ಅನುಮತಿ ಸಿಕ್ಕಿದ ತಕ್ಷಣವೇ ಸೂಚನೆ ನೀಡುತ್ತೇವೆ ಎಂದು ಪಿಯು ಉಪನಿರ್ದೇಶಕರೊಬ್ಬರು ಹೇಳಿದರು. ಇಂಗ್ಲೀಷ್ ಪರೀಕ್ಷೆ ಆರಂಭಕ್ಕೂ ಮೊದಲೇ ಮೌಲ್ಯಮಾಪನ ಕಾರ್ಯವನ್ನು ಆರಂಭಿಸಿದರೆ, ಇಂಗ್ಲೀಷ್ ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಫಲಿತಾಂಶ ನೀಡಲು ಸಹಕಾರಿಯಾಗುತ್ತದೆ.
ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೂ ಇದು ಅನುಕೂಲವಾಗಲಿದೆ. ಆದ ಕಾರಣ ಆದಷ್ಟು ಬೇಗ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲು ಕಾರ್ಯ ಯೋಜನೆ ಸಿದ್ದಪಡಿಸಿದೆ ಎಂದರು. ಸರ್ಕಾರದ ಆದೇಶದನ್ವಯ ಫಲಿತಾಂಶ ಹೊರಬಿದ್ದ ಕೂಡಲೇ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆದು, ಫಲಿತಾಂಶ ಬಂದ ಬಳಕವಷ್ಟೇ ಅಧಿಕೃತವಾಗಿ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿ, ಬಳಿಕ ತರಗತಿಗಳನ್ನು ಪ್ರಾರಂಭ ಮಾಡಬೇಕಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಎಲ್ಲಾ ಜಿಲ್ಲೆಗಳಲ್ಲಿಯೂ ಎಲ್ಲಾ ವಿಷಯಗಳ ಮೌಲ್ಯಮಾಪಕರು ಸಾಕಷ್ಟು ಸಂಖ್ಯೆಯಲಿಲ್ಲ. ಕನ್ನಡ ಸಹಿತವಾಗಿ, ಎಲ್ಲ ಜಿಲ್ಲೆಯಲ್ಲೂ ಕೆಲವೊಂದು ವಿಷಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರು ಸಿಗುತ್ತಾರೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ವಿಷಯಕ್ಕೆ ಮೌಲ್ಯಮಾಪಕರ ಕೊರತೆಯಿದೆ. ಹಿಂದೆ ನಡೆಯುತ್ತಿದ್ದಂತೆ ಮೌಲ್ಯಮಾಪನ ಕಾರ್ಯ ಮಾಡಲು ಸಾಧ್ಯವಿಲ್ಲ. ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಪಿಯು ಇಲಾಖೆಯ ನಿರ್ದೇಶಕಿ ಕನಗವಲ್ಲಿ ತಿಳಿಸಿದರು.