ಬೆಂಗಳೂರು,ಮೇ 16 (Daijiworld News/MSP): ಎಳೆ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಪ್ರಾರಂಭಿಸಿರುವ ಶಾಲೆಗಳ ವಿರುದ್ದ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಗುಡುಗಿದ್ದಾರೆ.
ರಾಜ್ಯದ ಹಲವು ಶಾಲಾ ಆಡಳಿತ ಮಂಡಳಿಗೂ ಎಲ್ ಕೆ ಜಿ, ಯುಕೆಜಿಯ ಮಕ್ಕಳ ದಾಖಲಾತಿ ಪ್ರಾರಂಭಿಸಿದ್ದು , ಆನ್ ಲೈನ್ ಮೂಲಕ ಶಿಕ್ಷಣ ನೀಡುತ್ತೇವೆ ಎಂದು ಪ್ರಚಾರ ಆರಂಭಿಸಿವೆ. ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು" ಎಲ್ ಕೆ ಜಿ, ಯುಕೆಜಿಯ ಎಳೆ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಕೊಡಬೇಕಾಗುವ ಮನಸ್ಥಿತಿಗೆ ಏನೆನ್ನಬೇಕು ಹಣದ ದುರಾಸೆಯಷ್ಟೇ, ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ" ಎನ್ನುವ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದಕ್ಕಾಗಿ ಹಲವು ವಿದ್ಯಾಸಂಸ್ಥೆಗಳು ಈಗಾಗಲೇ ಆನ್ ಲೈನ್ ಶಿಕ್ಷಣದ ಮೊರೆ ಹೋಗಿದ್ದಾರೆ.
ಕೊರೊನಾದಿಂದ ಸಾಮಾಜಿಕ ಅಂತರ ನಮ್ಮ ಬದುಕಿನ ಸಹಜ ರೀತಿಯಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ರೀತಿಯ ಕಲಿಕಾ ವಾತಾವರಣ ಕಲ್ಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು, ಪರ್ಯಾಯ ಮಾರ್ಗಗಳ ಕುರಿತಂತೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲೂ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಈ ನಡುವೆ ರಾಜ್ಯದ ಹಲವು ಶಾಲಾ ಆಡಳಿತ ಮಂಡಳಿಗೂ ಎಲ್ ಕೆ ಜಿ, ಯುಕೆಜಿಯ ಮಕ್ಕಳ ದಾಖಲಾತಿ ಪ್ರಾರಂಭಿಸಿದ್ದು , ಆನ್ ಲೈನ್ ಮೂಲಕ ಶಿಕ್ಷಣ ನೀಡುತ್ತೇವೆ ಎಂದು ಪ್ರಚಾರ ಮಾಡತೊಡಗಿದೆ.