ಬೆಂಗಳೂರು, ಮೇ 16 (Daijiworld News/MSP): ಕೊರೊನಾದಿಂದ ಬಳಿಕ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ರೀತಿಯ ಕಲಿಕಾ ವಾತಾವರಣ ಕಲ್ಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು, ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗಗಳ ಕುರಿತಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿದ್ದು, ಇದರಲ್ಲಿ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ವಿದ್ಯಾರ್ಥಿಗಳಿಗೆ ಶಿಫ್ಟ್ (ಪಾಳಿ ) ಆಧಾರದ ಮೇಲೆ ಪ್ರೌಢಶಾಲೆ ಹಾಗೂ ಪಿಯು ತರಗತಿ ನಡೆಸಲು ಒಪ್ಪಿಗೆ ಕೋರಲಾಗಿದೆ. ಒಂದು ವೇಳೆ ಈ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿದ್ರೆ ಶಿಫ್ಟ್ ಆಧಾರದ ಮೇಲೆ ಶೀಘ್ರದಲ್ಲೇ ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು
ಶುಕ್ರವಾರ ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶಾಲೆ ಮತ್ತು ಕಾಲೇಜು ತರಗತಿಯನ್ನು ಅವಧಿಯ ಆಧಾರದಲ್ಲಿ ವಿಭಾಗಿಸಿ ಶಾಲಾ ತರಗತಿಗಳನ್ನು ಶಿಫ್ಟ್ ಪದ್ಧತಿಯಲ್ಲಿ ನಡೆಸುವುದು ಸಧ್ಯಕ್ಕೆ ಸೂಕ್ತ ಎಂಬ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಸ್ತಾವನೆ ಪ್ರಕಾರ 2 ಶಿಫ್ಟ್ ಗಳ ಸಮಯ ನಿಗದಿ ಮಾಡಲಾಗಿದ್ದು, ಪ್ರಥಮ ಪಾಳಿ ಬೆಳಗ್ಗೆ 7.50ರಿಂದ 12.20 ಮತ್ತು ಎರಡನೇ ಪಾಳಿ ಮಧ್ಯಾಹ್ನ 12.10ರಿಂದ ಸಂಜೆ 5ರ ವರೆಗೆ ಇರಲಿದೆ. ಈ ಪಾಳಿ ವ್ಯವಸ್ಥೆ ಜಾರಿಗೆ ತಂದರೆ ಒಂದು ಡೆಸ್ಕ್ನಲ್ಲಿ ಮೂವರು ವಿದ್ಯಾರ್ಥಿಗಳು ಕೂರಲು ಅವಕಾಶ ಕಲ್ಪಿಸುವ ಮೂಲಕ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯ.
ಪ್ರಸ್ತಾವನೆಯಲ್ಲಿನ ಪ್ರಮುಖಾಂಶಗಳು:
-ವಾರವೊಂದಕ್ಕೆ ಇದ್ದ 45 ತರಗತಿ ಕಡಿತಗೊಳಿಸಿ ಒಂದು ವಾರಕ್ಕೆ 36 ತರಗತಿ ನಡೆಸುವುದು
-ಪಾಳಿ ಆಧಾರವಾಗಿ ತರಗತಿ ನಡೆಸುವಾಗ ಕೊಠಡಿಗಳ ಕೊರತೆ ಉಂಟಾದಲ್ಲಿ ಗ್ರಂಥಾಲಯ ಕೊಠಡಿ. ಕ್ರೀಡಾ ಕೊಠಡಿ, ಕಂಪ್ಯೂಟರ್ ಕೊಠಡಿ ಬಳಸಿಕೊಳ್ಳಬೇಕು.
-ಪ್ರಾರ್ಥನೆ ಸಮಯದಲ್ಲಿ ಮಾಸ್ಕ್ ಧರಿಸುವುದು. ಶೌಚಾಲಯ ಮತ್ತು ಊಟದ ಸಮಯದಲ್ಲಿ ವಿದ್ಯಾರ್ಥಿಗಳು ಕೈ ತೊಳೆದುಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕು
-ಪಾಳಿ ಪದ್ಧತಿ ನಗರ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದು, ಗ್ರಾಮೀಣ ಪ್ರದೇಶದಲ್ಲಿ ಜಾರಿ ಬಗೆಗೆ ಸ್ಥಳೀಯ ಆಡಳಿತ ಅಲ್ಲಿನ ಪರಿಸ್ಥಿತಿಗೆ ಅನುಸಾರವಾಗಿ ಸ್ಥಳೀಯ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬಹುದು.
-ಖಾಸಗಿ ಶಾಲೆಯ ಆಡಳಿತ ಮಂಡಳಿ ಮಾಡುವ ಸಾರಿಗೆ ವ್ಯವಸ್ಥೆ ಯಲ್ಲಿ ವಿದ್ಯಾರ್ಥಿಗಳನ್ನು ಕರೆತರುವಾಗ ಸಾಮಾಜಿಕ ಅಂತರ ಪಾಲನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು