ನವದೆಹಲಿ, ಮೇ 16 (Daijiworld News/MSP): ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ಕ್ಷಿಪ್ರವಾಗಿ ವ್ಯಾಪ್ತಿಸುತ್ತಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3970 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 85,970ಕ್ಕೆ ತಲುಪಿದೆ. ಕೊರೊನಾಗೆ ಬಲಿಯಾದ ಸಂಖ್ಯೆ ಮೂರು ಸಾವಿರದ ಸಮೀಪಿಸಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದೆ.
ಚೀನದಲ್ಲಿ ಶುಕ್ರವಾರದ ಮಾಹಿತಿ ಪ್ರಕಾರ 82,993 ಸೋಂಕು ಪ್ರಕರಣ ಹಾಗೂ ೪೬೩೩ ಸಾವಿನ ಪ್ರಕರಣ ದೃಢಪಟ್ಟಿದೆ. ಭಾರತದಲ್ಲಿ ಶುಕ್ರವಾರ ಒಂದೇ ದಿನ 3970 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 103 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 2752ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ೩೫೦೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ.
ಇದರ ನಡುವೆ ಭಾರತ ಅತೀ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪೈಕಿ 11ನೇ ಸ್ಥಾನಕ್ಕೂ ಏರಿದೆ. ಪ್ರಸ್ತುತ 1.16ಲಕ್ಷ ಸೋಂಕಿತರೊಂದಿಗೆ ಇರಾನ್ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಪತ್ತೆಯಾಗುತ್ತಾ ಹೋದರೆ, ಇರಾನ್ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ದೂರ ಉಳಿದಿಲ್ಲ.
ಈ ನಡುವೆ 85940 ಮಂದಿ ಸೋಂಕಿತರ ಪೈಕಿ 30153 ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಆತಂಕದ ನಡುವೆಯೇ ಗುಣಮುಖ ಪ್ರಮಾಣವೂ ಹೆಚ್ಚುತ್ತಿರುವುದು ಸಮಾಧಾನ ಸಂಗತಿಯಾಗಿದೆ. ಪ್ರಸ್ತುತ ದೇಶದಲ್ಲಿ ಇನ್ನೂ 53035 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ