ನವದೆಹಲಿ, ಮೇ 16 (Daijiworld News/MSP): ವಿಶೇಷ ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಿ , ಜನರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿರುವ ಅವರು, ಕೊರೊನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಶಮನಗೊಳಿಸಲು ಕೇಂದ್ರ ಸರ್ಕಾರ ರೂ.20 ಲಕ್ಷ ಕೋಟಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಆದರೆ ಈ ಆರ್ಥಿಕ ಪ್ಯಾಕೇಜ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮರು ಪರಿಶೀಲನೆ ನಡೆಸುವ ಅಗತ್ಯವಿದ್ದು ಬಡ ಜನರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಬೇಕಾಗಿದೆ ಎಂದು ಹೇಳಿದ್ದಾರೆ.
ಮಕ್ಕಳು ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ. ಬದಲಾಗಿ ಮಕ್ಕಳ ಸಂಕಷ್ಟಕ್ಕೆ ನೆರವಾಗುತ್ತಾಳೆ. ಬಡ ಜನರ ಕೈಗೆ ಹಣ ಸಿಗದೆ ಇದ್ದರೆ, ಬಡವರು ನಿರ್ಗತಿಕರು ಏನು ಮಾಡಬೇಕು. ಹಾಗೆಯೇ ಕೇಂದ್ರ ಕೂಡ ಜನರ ಜೇಬಿಗೇ ಹಣ ತಲುಪುವಂತೆ ಕೆಲಸ ಮಾಡಬೇಕಿದೆ. ಹೀಗಾಗಿ ಆರ್ಥಿಕ ಪ್ಯಾಕೇಜ್ ಮರುಪರಿಶೀಲನೆಯ ಅಗತ್ಯವಿದೆ ಎಂದು ಮೋದಿಗೆ ಸಲಹೆ ನೀಡಿದ್ದಾರೆ.
ನನ್ನ ಸಲಹೆಗಳನ್ನು ಸರ್ಕಾರ ಒಪ್ಪಿಕೊಳ್ಳಬಹುದು ಎನ್ನುವ ನಂಬಿಕೆ ನನಗಿದೆ. ಸರ್ಕಾರವು ತಕ್ಷಣ ಜನರ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು. ಇದನ್ನು ಮಾಡದಿದ್ದರೆ, ಮುಂದೆ ಹಲವು ದುರಂತಗಳಿಗೆ, ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.