ಬೆಂಗಳೂರು, ಮೇ 16 (DaijiworldNews/PY) : ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಇರುವ ಊರಿನಿಂದಲೇ ಬರೆಯಲು ಅವಕಾಶ ಕಲ್ಪಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಹೊಸ ಸುತ್ತೋಲೆಯ ಪ್ರಕಾರ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇರುವ ಊರಿನಿಂದಲೇ ಪರೀಕ್ಷೆ ಬರೆಯಬಹುದು. ಯಾವ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬರೆಯಲು ಬಯಸುತ್ತಾರೋ ಅದೇ ಕಡೆ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಇಲಾಖೆ ಸೂಚಿಸಿದೆ.
ವಿದ್ಯಾರ್ಥಿಗಳು ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ವಿದ್ಯಾರ್ಥಿಯ ಹೆಸರು, ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್, ಕಾಲೇಜಿನ ಸಂಕೇತ ಸಂಖ್ಯೆ, ವಿದ್ಯಾರ್ಥಿ ನಂಬರ್, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ವಿದ್ಯಾರ್ಥಿಯ ಮೊಬೈಲ್ ನಂಬರ್, ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತ, ಈಗಾಗಲೇ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರ ಹೊರತುಪಡಿಸಿ, ಪ್ರಸ್ತುತ ವಾಸವಿರುವ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛೆ ಇದ್ದರೆ ಅದರ ವಿವರ ನೀಡಬೇಕು.
ಹಾಗಾಗಿ ಕೆಲವು ಮಾಹಿತಿಗಳನ್ನು ddtt.pue@gmail.comಗೆ ಅಥವಾ ಇಲಾಖೆಯ ಕಚೇರಿಗೆ ಖುದ್ದಾಗಿ ತಲುಪಿಸಬೇಕು. ವಾಟ್ಸಾಪ್ ಮೂಲಕ ತಲುಪಿಸಿದರೆ ಅದನ್ನು ಪರಗಣಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಲಾಕ್ಡೌನ್ ಘೋಷಣೆ ಮಾಡಿದ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ಹಂತದಲ್ಲಿತ್ತು. ಅಲ್ಲದೇ ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಉಳಿದಿತ್ತು. ಆದರೆ, ಈಗ ಅದರ ಸಿದ್ದತೆ ಆರಂಭವಾಗಿದ್ದು, ಜೂನ್ನಲ್ಲಿ ಪರೀಕ್ಷೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ.