ಚಿಕ್ಕಮಗಳೂರು, ಮೇ 16 (Daijiworld News/MSP): ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ.ಗಳ ವರೆಗೂ ಸಾಲ ನೀಡಲಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.
ಅವರು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಅಡುಗೆ ಸಹಾಯಕರು ಹಾಗೂ ಸಿಬ್ಬಂದಿಗಳಿಗೆ ೨೫೦ಕ್ಕೂ ಹೆಚ್ಚು ದಿನಸಿ ಆಹಾರ ಪದಾರ್ಥಗಳ ಕಿಟ್ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿ ಕೊರೋನಾ ಸೋಂಕು ದೇಶ ಹಾಗೂ ರಾಜ್ಯವ್ಯಾಪಿ ಹರಡಿದ್ದು ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಜನರು ಭಯಪಡುವುದು ಬೇಡ ವೈಯಕ್ತಿಕ ಸ್ವಚ್ಛತೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದಿದ್ದಾರೆ.
ಕೇಂದ್ರ ಸರ್ಕಾರವು ಲಾಕ್ಡೌನ್ ಸಂಕಷ್ಟದಲ್ಲಿರುವ ಜನತೆಗೆ ಆರಂಭದಲ್ಲಿ 1 ಲಕ್ಷ 70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರತಿ ಬಡಕುಟುಂಬಗಳಿಗೆ 10 ಕೆ.ಜಿ. ಅಕ್ಕಿ, 2 ಕೆ.ಜಿ ಬೇಳೆ ನೀಡಿತ್ತು. ಉಜ್ವಲ ಯೋಜನೆ ಅಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್, ಜನ್ಧನ್ ಖಾತೆಗೆ ಹಣ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2000 ರೂ. ನೀಡಿತ್ತು ಜೊತೆಗೆ ರಾಜ್ಯ ಸರ್ಕಾರವು 10ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ವಿತರಣೆ ಮಾಡಿತ್ತು ಇದೀಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ. ಗಳ ವರೆಗೆ ಸಾಲ ನೀಡಲಿದೆ ಎಂದು ವಿವರಿಸಿದ್ದಾರೆ
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಸಾವಿರ ಗಡಿ ದಾಟಿದ್ದು, ಕಳೆದ ವಾರದಲ್ಲಿ ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲೂ ಪ್ರಕರಣ ದಾಖಲಾಗಿದೆ ಅದೃಷ್ಟವಶತ್ ಇದುವರೆಗೂ ಚಿಕ್ಕಮಗಳೂರಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಈ ಬಗ್ಗೆ ಮೈಮರೆಯುವುದು ಬೇಡ ಎಂದ ಅವರು ದೇಶದಲ್ಲಿ ಶೇ. 100 ಜನರಿಗೆ ಸೋಂಕು ಬಂದಲ್ಲಿ 3 ಜನರು ಸಾವನ್ನಪ್ಪಿ 97 ಜನರು ಗುಣಮುಖರಾಗಿದ್ದಾರೆ. ಅನಾರೋಗ್ಯ, ವಿವಿಧ ಖಾಯಿಲೆಯಿಂದ ಬಳಲುವವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಜೊತೆಗೆ ಶೇ.60ರಷ್ಟು ಜನರು ಯಾವುದೇ ಔಷಧಿ ಇಲ್ಲದೆಯೂ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ
ಲಾಕ್ಡೌನ್ ವೇಳೆ ಸರ್ಕಾರದೊಂದಿಗೆ ಬೇರೆ ಬೇರೆ ಸಂಘ-ಸಂಸ್ಥೆಗಳು ತಮ್ಮ ಕೈಲಾದ ನೆರವು ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ ಇಲ್ಲಿಯವರೆಗೆ ಚಿಕ್ಕಮಗಳೂರು ನಗರ ಹಾಗೂ ತಾಲ್ಲೂಕಿನಾದ್ಯಾಂತ ಸುಮಾರು 27 ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಇದೀಗ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ರವರು ಬಡವರ ಕಷ್ಟಗಳಿಗೆ ಸ್ಪಂದಿಸಿ ಸರ್ಕಾರದ ಜೊತೆಗೆ ಕೈಜೋಡಿಸಿರುವುದು ಹೆಮ್ಮೆಯ ವಿಚಾರ ಎಂದರು.