ಬೆಂಗಳೂರು, ಮೇ 16 (DaijiworldNews/SM): ಕೊವಿಡ್-19 ಸಂಕಷ್ಟದಲ್ಲಿದ್ದ ದೇಶಕ್ಕೆ ಕೇಂದ್ರ ಸರಕಾರ ನೆರವಾಗಿದೆ. ದೇಶವನ್ನು ಸ್ವಾವಲಂಬಿ ಭಾರತವನ್ನಾಗಿಸಲು ಕೇಂದ್ರ ಸರ್ಕಾರ ಘೋಷಿಸಿರುವ ನಾಲ್ಕನೇ ದಿನದ ಪರಿಹಾರ ಕ್ರಮಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಲವಾರು ಯೋಜನೆಗಳು ಮತ್ತು ಹಣಕಾಸು ಸಹಾಯ ರಾಜ್ಯಕ್ಕೆ ನೆರವಾಗಲಿದೆ. ಅಲ್ಲದೆ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಹಲವಾರು ಖನಿಜ ನಿಕ್ಷೇಪಗಳಿವೆ. ಅವುಗಳ ಗಣಿಗಾರಿಕೆ ಮಾಡಲು ಖಾಸಗಿ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಖನಿಜ ಸಂಬಂಧಿಸಿದ ಕಾಯ್ದೆ ಇದಕ್ಕೆ ಸಹಕಾರಿಯಾಗಲಿದೆ. ಈ ಕ್ಷೇತ್ರದ ಗಣಿಗಾರಿಕೆ ಅವಕಾಶಗಳ ನಿರ್ಬಂಧಗಳು ಸಡಿಲಗೊಳ್ಳಲಿದ್ದು, ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.