ಬೆಂಗಳೂರು, ಮೇ 17 (DaijiworldNews/PY) : ಸರ್ಕಾರಕ್ಕೆ ಮಕ್ಕಳ ಹಿತ ಕಾಪಾಡುವ ಜವಾಬ್ದಾರಿಯಿದೆ. ಆ ಕಾರಣದಿಂದ ತರಾತುರಿಯಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಇಲಾಖೆಯು ಎರಡು ಪಾಳಿಗಳಲ್ಲಿ ತರಗತಿ ನಡೆಸುವ ವಿಚಾರದ ಬಗ್ಗೆ ನಡೆಸುತ್ತಿರುವ ಸಿದ್ದತೆಯನ್ನು ಆಧರಿಸಿ ಜೂನ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಪ್ರಾರಂಭವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಪ್ರಚಾರವೂ ದೊರೆತಿದೆ.
ಪೋಷಕರು ಈ ಬೆಳವಣಿಗೆಯಿಂದ ಕಂಗಾಲಾಗಿದ್ದು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಚಿವರ ಗಮನಕ್ಕೆ ಇದನ್ನು ತಂದಿದ್ದು, ಆ ಹಿನ್ನೆಲೆ ಈ ಸ್ಪಷ್ಟನೆಯನ್ನು ಸಚಿವರು ನೀಡಿದ್ದಾರೆ.
ಶುಕ್ರವಾರ ಪಾಳಿ ಶಾಲೆ ನಡೆಸುವ ವಿಚಾರವಾಗಿ ನೀಡಲಾದ ಟಿಪ್ಪಣಿ ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಾಗಿ ತಯಾರಿ ಮಾಡಲಾದ ಮಾಹಿತಿಯಷ್ಟೆ. ಅದು ಅಧಿಕೃತ ಸುತ್ತೋಲೆಯಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರೂ ಹೇಳಿದ್ದಾರೆ.
ಶನಿವಾರ ಸಚಿವ ಸುರೇಶ್ ಕುಮಾರ್ ಅವರು ವಿಧಾನ ಪರಿಷತ್ನ ಶಿಕ್ಷಕ–ಪದವೀಧರ ಕ್ಷೇತ್ರದ ಶಾಸಕರೊಂದಿಗೆ ವಿಡಿಯೊ ಸಂವಾದ ನಡೆಸಿದರು. ಎಸ್ಎಸ್ಎಲ್ಸಿ ಪರೀಕ್ಷೆ ಎಂಬುದು ಪ್ರಮುಖ ಘಟ್ಟ. ಆ ಪರೀಕ್ಷೆ ನಡೆಯಲೇಬೇಕು ಎಂದು ಬಹುತೇಕರು ಹೇಳಿದ್ದಾರೆ.
ಕೊರೊನಾ ಕಡಿಮೆಯಾದ ನಂತರ ತರಗತಿಗಳನ್ನು ನಡೆಸುವ ಬಗ್ಗೆ, ಸಾಮಾಜಿಕ ಅಂತ್ರ ಕಾಯ್ದುಕೊಳ್ಳುವಿಕೆ, ಪಾಳಿಯಲ್ಲಿ ತರಗತಿ ಪಿಯು ಪಠ್ಯ ಕಡಿತ ಮಾಡಿದರೆ ಆಗಬಹುದಾದ ತೊಂದರೆಗಳ ಸಹಿತ ಹಲವು ವಿಷಯಗಳ ಬಗ್ಗೆ ಸಲಹೆಗಳು ಬಂದವು.