ಬೆಂಗಳೂರು, ಮೇ 17 (DaijiworldNews/PY) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ಮೆಂಟ್ ವಲಯ, ಚೆಕ್ಪೋಸ್ಟ್ ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಹೇಳಿದ್ದು, ಅಲ್ಲದೇ ಕೊರೊನಾ ಸೋಂಕಿನಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರೆ 30 ಲಕ್ಷ ವಿಮೆ ನೀಡುವುದಾಗಿ ಹೇಳಿದ್ದಾರೆ.
ಕೊರೊನಾ ನಿಯಂತ್ರಣ ಕರ್ತವ್ಯದ ವೇಳೆಯಲ್ಲಿ ಬೇರೆ ಯಾವುದೇ ರೀತಿಯಾದ ಅಪಘಾತದಿಂದ ಮರಣ ಹೊಂದಿದರೆ ಅವರಿಗೂ ಕೂಡಾ ದೊರೆಯುವಂತೆ ನೋಡಿಕೊಳ್ಳಲು ಹೇಳಿದ್ದಾರೆ. ಕೊರೊನಾ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಪೊಲೀಸರಿಗೂ ಪಿಪಿಇ ಕಿಟ್ ವಿತರಣೆ ಮಾಡುವುದು. ಕಂಟೈನ್ಮೆಂಟ್ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ವಿಶ್ರಾಂತಿ ಒದಗಿಸುವ ನಿಟ್ಟಿನಲ್ಲಿ ಶಿಫ್ಟ್ ಮೇಲೆ ಕರ್ತವ್ಯ ಮಾಡುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಚೆಕ್ ಪೋಸ್ಟ್, ಕಂಟೇನ್ಮೆಂಟ್ ವಲಯ ಹಾಗೂ ಕೊರೊನಾ ನಿಯಂತ್ರಣ ಆಸ್ಪತ್ರೆಗಳ ಸಮೀಪ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಉಪಾಹಾರ, ನೀರು, ಊಟ ಸೇರಿ ಅಗತ್ಯ ಸೌಕರ್ಯಗಳು ದೊರಕುವಂತೆ ನೋಡಿಕೊಂಡು ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಮನೋಬಲ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.