ನವದೆಹಲಿ, ಮೇ 17 (DaijiworldNews/PY) : ಅಂಫಾನ್ ಚಂಡಮಾರುತ ಭಾರತದ ಹಲವೆಡೆ ಪ್ರಭಾವ ಬೀರಲಿದ್ದು, ಈ ಪ್ರಭಾವ ದಕ್ಷಿಣ ರಾಜ್ಯಗಳಲ್ಲಿ ತೀವ್ರವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭಾನುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಆಗ್ನೇಯ ಬಂಗಾಳಕೊಲ್ಲಿ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ಮುಂದಿನ 12 ಗಂಟೆಗಳ ಅವಧಿಯಲ್ಲಿ ಅಂಫಾನ್ ಚಂಡಮಾರುತ ತನ್ನ ಪ್ರಭಾವವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದ್ದು, ಇದರ ತೀವ್ರತೆ ನಾಳೆ ಬೆಳಗ್ಗೆಯವರೆಗೆ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಅಂಫಾನ್ ಚಂಡಮಾರುತದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿವೆ. ಚಂಡಮಾರುತದಿಂದಾಗುವ ಅನಾಹುತವನ್ನು ನಿಯಂತ್ರಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿವೆ.
ಒಡಿಶಾದಲ್ಲಿ ಈಗಾಗಲೇ ಅಂಫಾನ್ ಚಂಡಮಾರುತದ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಶುಕ್ರವಾರವೇ ಮುಂಜಾಗ್ರತ ಕ್ರಮವಾಗಿ 12 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಒಡಿಶಾ ಉತ್ತರ ಭಾಗದ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗ ಸೂಕ್ತವಾದ ರೀತಿಯಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಚಂಡಮಾರುತದಿಂದ ಹಾನಿ ಸಂಭವಿಸಿದರೆ, ಆಶ್ರಯಕ್ಕಾಗಿ ಕಟ್ಟಡಗಳನ್ನು ಗುರುತಿಸುವಂತೆಯೂ ಸೂಚಿಸಲಾಗಿದೆ. ಕೊರೊನಾ ಕ್ವಾರಂಟೈನ್ ಕೇಂದ್ರಗಳಾಗಿ ಬಹುತೇಕ ಆಶ್ರಯ ಕಟ್ಟಡಗಳನ್ನು ಉಪಯೋಗ ಮಾಡಲಾಗುತ್ತಿದೆ.