ಹೈದರಾಬಾದ್, ಮೇ 17 (Daijiworld News/MB) : ಬುಧವಾರ ಅಪರಣವಾಗಿದ್ದ 18 ತಿಂಗಳ ಮಗುವನ್ನು ಹೈದರಾಬಾದ್ ಪೊಲೀಸರು ರಕ್ಷಿಸಿದ್ದು, ಮಗುವಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದು ವರದಿ ತಿಳಿಸಿದೆ.
ಈ ಮಗುವಿನ 22 ವರ್ಷದ ತಾಯಿ ತಾನು ನಿದ್ದೆ ಮಾಡಿದಾಗ ಮಗು ಅಪಹರಣವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಮಗುವನ್ನು ಅಪಹರಣ ಮಾಡಿದ್ದ 27 ವರ್ಷದ ಇಬ್ರಾಹಿಂ ಎಂಬಾತನನ್ನು ಸೆರೆಹಿಡಿದು ಮಗುವನ್ನು ರಕ್ಷಣೆ ಮಾಡಿದ್ದರು.
ಮಗುವನ್ನು ರಕ್ಷಣೆ ಮಾಡಿದ ಬಳಿಕ ತಾಯಿಯೊಂದಿಗೆ ಬೆರೆಯಲು ಅವಕಾಶ ನೀಡಿದ ಪೊಲೀಸರು ಮದ್ಯವ್ಯಸನಿಯಾದ ತಾಯಿಯು ಮಗುವನ್ನು ಸರಿಯಾಗಿ ನೋಡಿಕೊಳ್ಳಲಾರಲೂ ಎಂದು ಮಕ್ಕಳ ಕಲ್ಯಾಣ ಇಲಾಖೆಗೆ ಮಗುವನ್ನು ಹಸ್ತಾಂತರ ಮಾಡಿದ್ದು ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಮಗುವಿನ ತಾಯಿ, ಮಗುವನ್ನು ಅಪಹರಿಸಿದ್ದವನ ಕುಟುಂಬದವರು, ಪೊಲೀಸರು ಮತ್ತು ಇಬ್ಬರು ಪತ್ರಕರ್ತರು ಸೇರಿ ಮಗುವಿನ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಅಪಹರಣ ಮಾಡಿದ ಇಬ್ರಾಹಿಂ ಎಂಬಾತನಿಗೆ ಗಂಡು ಮಗುವಿಲ್ಲದ ಕಾರಣದಿಂದಾಗಿ ಮಗುವಿಗೆ ಹಣ್ಣಿನ ಆಮಿಷವೊಡ್ಡಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದ ಎಂದು ತಿಳಿದು ಬಂದಿದೆ. ಈತನಿಗೆ ಇದ್ದ ಎಲ್ಲಾ ಗಂಡು ಮಕ್ಕಳು ವಿವಿಧ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದವು ಎನ್ನಲಾಗಿದೆ.