ಬೆಂಗಳೂರು, ಮೇ 17 (DaijiworldNews/PY) : ಪ್ರತಿನಿತ್ಯ ಕುಡಿದು ಬಂದು ಜಗಳವಾಡಿ, ಹಲ್ಲೆ ನಡೆಸುತ್ತಿದ್ದ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಘಟನೆ ಹನುಮಂತನಗರದಲ್ಲಿ ನಡೆದಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಹನುಮಂತ ನಗರ ಠಾಣೆ ವ್ಯಾಪ್ತಿಯ ಕತ್ರಿಗುಪ್ಪೆ ಬಳಿ ಉಮೇಶ್ (45) ಎನ್ನಲಾಗಿದೆ. ಈ ಹಿನ್ನಲೆ ಪತ್ನಿ ಆಶಾ (36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆ ಕಲಬುರ್ಗಿಯ ದಂಪತಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದು, ಗಾರೆ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಮೇಶ್ ಮದ್ಯ ವ್ಯಸನಿಯಾಗಿದ್ದು, ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಖರ್ಚು ಮಾಡುತ್ತಿದ್ದರು. ಈ ನಡುವೆ ನಿತ್ಯವೂ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ವಿನಾಕಾರಣ ಹಲ್ಲೆ ಮಾಡುತ್ತಿದ್ದರು.
ಇತ್ತೀಚೆಗೆ ಮನೆಯಲ್ಲಿದ್ ಅಡುಗೆ ಅನಿಲ ಸಿಲಿಂಡರ್ ಖಾಲಿಯಾಗಿತ್ತು. ಆ ಕಾರಣದಿಂದ ಹೊಸ ಸಿಲಿಂಡರ್ ತರುವಂತೆ ಹೇಳಿದ್ದ ಪತ್ನಿ,ಪತಿ ಉಮೇಶ್ ಕೈಯಲ್ಲಿ ₹500 ನೀಡಿದ್ದರು, ಆದರೆ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಮನೆಗೆ ವಾಪಸ್ಸಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿ ಮತ್ತೆ ಉಮೇಶ್ ಜಗಳ ಮಾಡಿದ್ದು, ಈ ಸಂದರ್ಭ ಪತ್ನಿಯ ಮೇಲೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಇದರಿಂದ ಕೋಪಗೊಂಡ ಪತ್ನಿ ಅದೇ ದೊಣ್ಣೆಯನ್ನು ಕಸಿದುಕೊಂಡು ಪತಿಯ ತಲೆಗೆ ಹೊಡೆದಿದ್ದರು. ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತಸ್ರಾವದಿಂದ ಮೃತಟ್ಟಿದ್ದರು ಎಂದು ಹೇಳಿದ್ದಾರೆ.
ನಾನು ಪತಿಯ ಕಿರುಕುಳದಿಂದ ಬೇಸತ್ತಿದ್ದೆ. ಆತ್ಮ ರಕ್ಷಣೆಗೋಸ್ಕರ ಕೊಲೆ ಮಾಡಿರುವುದಾಗಿ ಪತ್ನಿಯೇ ಒಪ್ಪಿಕೊಂಡು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.