ಆಂಧ್ರಪ್ರದೇಶ, ಮೇ 17 (DaijiworldNews/PY) : ತಿರುಮಲ ತಿರುಪತಿ ದೇಗುಲಕ್ಕೆ ಭಕ್ತಾದಿಗಳು ಕಾಣಿಕೆಯಾಗಿ ಸಲ್ಲಿಸಿರುವ ಜಮೀನುಗಳು ಹಾಗೂ ಕಟ್ಟಡಗಳು ಸೇರಿದಂತೆ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜೂನ್ ವೇಳೆಗೆ ದೇಗುಲ ಪುನರಾರಂಭವಾಗದೇ ಇದ್ದರೆ, ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ನಿಟ್ಟಿನಲ್ಲಿ ಹಾಗೂ ಸಿಬ್ಬಂದಿಗಳಿಗೆ ವೇತನ ನೀಡಲು ಈ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ.
ಟಿಟಿಡಿ ಪ್ರತಿ ತಿಂಗಳ ವೇತನಕ್ಕೆ ಹಾಗೂ ಪಿಂಚಣಿಗೆ ₹ 115 ಕೋಟಿ ವೆಚ್ಚ ಮಾಡಬೇಕಿದೆ. ಇದರ ಹೊರತಾಗಿಯೂ ಇತರ ನಿರ್ವಹಣಾ ವೆಚ್ಚಗಳು ಕೂಡಾ ಇವೆ. ಟಿಟಿಡಿಯಲ್ಲಿ ಹೊರಗುತ್ತಿಗೆ, ಕಾಯಂ ಹಾಗೂ ಗುತ್ತಿಗೆ ಸೇರಿದಂತೆ ಒಟ್ಟು 22 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ನಿಂದ 7 ಸಾವಿರಕ್ಕೂ ಹೆಚ್ಚು ಕಾಯಂ ಸಿಬ್ಬಂದಿ ಅರ್ಧ ವೇತನ ಪಡೆಯುತ್ತಿದ್ದಾರೆ.
ಸುಮಾರು ₹ 14 ಸಾವಿರ ಕೋಟಿ ನಿಶ್ಚಿತ ಠೇವಣಿಯನ್ನು ದೇಗುಲ ಹೊಂದಿದ್ದು, ಈ ವರ್ಷ ₹ 706 ಕೋಟಿ ಬಡ್ಡಿ ಗಳಿಸಲಿದೆ. ಸುಮಾರು 8 ಟನ್ನಷ್ಟು ಚಿನ್ನದ ಸಂಗ್ರಹ ಹೊಂದಿದೆ. ಇನ್ನೂ ಭಾವನಾತ್ಮಕ ಬೆಲೆ ಹೊಂದಿರುವ ಇವುಗಳನ್ನು ಉಪಯೋಗಿಸುವ ಆಯ್ಕೆ ನಮ್ಮ ಮುಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಗುಲವು ದೇವರ ದಯೆಯಿಂದ ಇನ್ನು ಒಂದು ತಿಂಗಳಿನಲ್ಲಿ ಭಕ್ತಾಧಿಗಳ ಪ್ರವೇಶಕ್ಕೆ ಮುಕ್ತವಾಗುವ ಭರವಸೆ ಇದೆ. ಎಂದು ಟಿಟಿಡಿ ಮಂಡಳಿ ಮುಖ್ಯಸ್ಥ ವೈವಿ ಸುಬ್ಬಾರೆಡ್ಡಿ ಹೇಳಿದ್ದಾರೆ.
ಪ್ರತಿ ತಿಂಗಳು ಲಡ್ಡುಗಳ ಮಾರಾಟ, ವಿಶೇಷ ದರ್ಶನ ಹಾಗೂ ಹುಂಡಿ ಕಾಣಿಕೆಯಿಂದ ದೊರಕುತ್ತಿದ್ದ ಸುಮಾರು ₹ 200 ಕೋಟಿ ಆದಾಯ ನಿಂತುಹೋಗಿದೆ. ಹಾಗಿದ್ದರೂ ಮಾರ್ಚ್, ಎಪ್ರಿಲ್ ವೇತನವನ್ನು ಪಾವತಿ ಮಾಡುತ್ತಿದ್ದೇವೆ. ಮೇ ತಿಂಗಳ ವೇತನಕ್ಕೂ ವ್ಯವಸ್ಥೆ ಮಾಡಿದ್ದೇವೆ. ಜೂನ್ ತಿಂಗಳಿನಲ್ಲಿ ಕೂಡಾ ದೇಗುಲದ ಮೂಲನಿಧಿ, ಠೇವಣಿ ಹಾಗೂ ಚಿನ್ನವನ್ನು ಬಳಸದೇ ಪರಿಸ್ಥಿತಿಯನ್ನು ನಿರ್ವಹಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಟಿಟಿಡಿಗೆ ಚೆನ್ನೈ, ಮುಂಬೈ ಸಹಿತ ದೇಶದೆಲ್ಲೆಡೆ ಸೇರಿದ ಭೂಮಿ, ಕಾಟೇಜ್ಗಳು ಹಾಗೂ ಉಪಯೋಗಿಸದೇ ಇರುವ ಇತರೆ ಸ್ವತ್ತುಗಳ ಮೌಲ್ಯ ಅಂದಾಜು ಸಾವಿರಾರು ಕೋಟಿ ರೂಪಾಯಿ. ಆದರೆ ಪ್ರಸ್ತುತ ಉದ್ದೇಶಕ್ಕಾಗಿ ಕೆಲವು ನೂರು ಕೋಟಿ ರೂಪಾಯಿಗಳ ಮೌಲ್ಯದ ಸ್ವತ್ತುಗಳನ್ನು ಮಾತ್ರ ನಗದೀಕರಿಸಲು ಗುರುತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.