ಕಲಬುರ್ಗಿ, ಮೇ 17 (Daijiworld News/MB) : ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಡಾ.ಶರಣಪ್ರಕಾಶ ಪಾಟೀಲ ಆರೋಪಿಸಿದ್ದಾರೆ.
ಈ ಕುರಿತಾಗಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ದಾಳಿ ತಪ್ಪಿಸಬೇಕಾದ್ದಲ್ಲಿ ಸಾಮೂಹಿಕವಾಗಿ ಎಲ್ಲರ ಪರೀಕ್ಷೆ ನಡೆಸಬೇಕು ಎಂಬ ಸಲಹೆಯನ್ನು ನಾವು ಈಗಾಗಲೇ ನೀಡಿದ್ದೇವೆ. ಆದರೆ ದೇಶದಲ್ಲಿ ಕೊರೊನಾ ಪತ್ತೆಯಾಗಿ 70 ದಿನವಾದರೂ ಕೂಡಾ ಸರ್ಕಾರವು ತಪಾಸಣೆಗೆ ಬೇಕಾದ ಕನಿಷ್ಟ ಸೌಕರ್ಯಗಳನ್ನೂ ನೀಡಿಲ್ಲ. ವಲಸೆ ಬಂದವರು, ಕ್ವಾರಂಟೈನ್ ಆದವರನ್ನೂ ತಪಾಸಣೆಗೆ ಒಳಪಡಿಸುವಷ್ಟೂ ವೈದ್ಯಕೀಯ ಸಲಕರಣೆಗಳು ಇಲ್ಲ. ಈ ಕಾರಣದಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲ್ಲೇ ಇದೆ. ರೋಗ ಬರುವವರೆಗೂ ಕಾದು ಕೂತಿರುವ ಕೇಂದ್ರದ ಈ ಧೋರಣೆಯಿಂದಾಗಿ ಬೇಸರ ಉಂಟಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ದುಡಿಯುವ ವರ್ಗಕ್ಕೆ 20 ಲಕ್ಷ ಕೋಟಿಯ ಪ್ಯಾಕೇಜ್ನಿಂದ ಹೆಚ್ಚಿನ ಉಪಯೋಗವಾಗಿಲ್ಲ. ಬರೀ ಸಾಲಮೇಳದಂತೆ ಆಗಿದೆ. ಅಷ್ಟು ಮಾತ್ರವಲ್ಲದೇ ಕೂಲಿ ಕಾರ್ಮಿಕರು ಹಾಗೂ ರೈತರ ಮೂಗಿಗೆ ತುಪ್ಪ ಸವರಿದ್ದಾರೆ. ರೈತರಿಗೆ ನೆರವಾಗುವ ಉದ್ದೇಶವಿದ್ದಲ್ಲಿ ವಬಸಾಲ ಮನ್ನಾ ಮಾಡಬಹುದಿತ್ತು. ಇಷ್ಟು ದೊಡ್ಡ ಮೊತ್ತದ ಘೋಷಣೆ ಮಾಡಿದರೂ ಯಾವ ಪ್ರಯೋಜನವೂ ಇಲ್ಲದಿದ್ದರೆ ಯಾಕಾಗಿ ಘೋಷಣೆ? ಎಂದು ಪ್ರಶ್ನೆ ಮಾಡಿದರು.
ಶ್ರಮಿಕ ವರ್ಗಗಳಿಗೆ ಆರ್ಥಿಕ ನೆರವು ನೀಡಿರುವ ಮುಖ್ಯಮಂತ್ರಿ ಘೋಷಣೆ ಸ್ವಾಗತಾರ್ಹವಾಗಿದೆ. ಆದರೆ ಆಟೊ ಚಾಲಕರು, ಹೂ ಮಾರಾಟಗಾರರು, ಕ್ಷೌರಿಕರಿಗೆ ನೀಡಿದಂಥ ಸಹಾಯವನ್ನು ಇತರ ಅಸಂಘಟಿತ ಕೂಲಿ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದ್ದು ಲಾಕ್ಡೌನ್ ಸಂದರ್ಭದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದಾಗಿ ಅಪರಾಧಗಳು ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.